ಹುಬ್ಬಳ್ಳಿ: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೇಲೆ ವಿನಾಯಿತಿ ನೀಡಿರುವುದು ಐತಿಹಾಸಿಕ ನಿರ್ಣಯವಾಗಿದೆ. ಇದರ ಲಾಭವನ್ನು ವ್ಯಾಪಾರಸ್ಥರು ಗ್ರಾಹಕರಿಗೆ ವರ್ಗಾಯಿಸುತ್ತಾರೆಂಬ ನಂಬಿಕೆ ಇದೆ. ಈ ಕುರಿತು ನಿಗಾ ವಹಿಸಲಾಗುತ್ತಿದ್ದು, ತಪ್ಪಿದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಜಿಎಸ್‌ಟಿ ವಿನಾಯಿತಿಯಿಂದ ವಿಕಸಿತ ಭಾರತ ಕಲ್ಪನೆಗೆ ಇಂಬು ನೀಡಲಿದೆ. ದೇಶದ ಜಿಡಿಪಿ ಹೆಚ್ಚಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹುಬ್ಬಳ್ಳಿ-ಧಾರವಾಡ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜಿಎಸ್‌ಟಿಯಲ್ಲಿ ವಿನಾಯಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನ ಸೇವಕ ಮೋದಿಜಿಗೊಂದು ಧನ್ಯವಾದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಎಸ್‌ಟಿ ಜಾರಿಗೆ ಬಂದಾಗ ವಿರೋಧ ವ್ಯಕ್ತಪಡಿಸಲಾಯಿತು. ಈ ಹಿಂದೆ ದೇಶದಲ್ಲಿ 1500 ಕಾನೂನುಗಳಿಂದ ಜನರಿಗೆ ತೊಂದರೆಯಾಗಿತ್ತು ಅದನ್ನು ತೆಗೆದು ಹಾಕುವ ಕೆಲಸ ಪ್ರಧಾನಿ ಮಾಡಿದ್ದಾರೆ. ಜಿಎಸ್‌ಟಿಯಿಂದ ದೇಶದ ಜನರಿಗೆ ಅನುಕೂಲವಾಗಿದೆ. ಈ ಕುರಿತು ಜನರಿಗೆ ಗೊತ್ತಿದೆ. ಪ್ರಧಾನಿ ಮೋದಿ ಅವರ ಭರವಸೆಯಂತೆ ಜಿಎಸ್‌ಟಿಯಲ್ಲಿ ಬದಲಾವಣೆ ತರಲಾಗಿದೆ. ಭಾರತದ ಅಭಿವೃದ್ಧಿಯ ನಾಗಲೋಟಕ್ಕೆ ಇದು ಸಹಕಾರಿಯಾಗಲಿದೆ ಎಂದರು.
ಆಟೋಮೊಬೈಲ್ ಉದ್ಯಮಗಳು ಈಗಾಗಲೇ ಜಿಎಸ್‌ಟಿ ವಿನಾಯಿತಿಯನ್ನು ಗ್ರಾಹಕರಿಗೆ ವರ್ಗಾಯಿಸಿದ್ದಾರೆ. ಸದ್ಯ ಲೋಕಸಭೆಗೆ ಚುನಾವಣೆ ಇಲ್ಲ. ಬಿಹಾರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜಿಎಸ್‌ಟಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ತೆರಿಗೆ ಕಡಿಮೆ ಮಾಡಿ ಮತ ಗಳಿಸುವ ಉದ್ದೇಶ ನಮ್ಮದಲ್ಲ. ಒಂದು ರಾಷ್ಟ್ರ-ಒಂದು ಚುನಾವಣೆಗೆ ಬನ್ನಿ ಎಂದು ನಾವು ಕಾಂಗ್ರೆಸ್‌ಗೆ ಸವಾಲು ಹಾಕಿದ್ದೇವೆ. ಅದಕ್ಕೂ ಕಾಂಗ್ರೆಸ್ ತಯಾರ ಇಲ್ಲ. ಒಂದು ರಾಷ್ಟ್ರೀಯ ಪಕ್ಷವಾಗಿ ವಿಚಾರ ಮಾಡುವ ದೃಷ್ಟಿಕೋನವೇ ಕಾಂಗ್ರೆಸ್ಸಿಗೆ ಇಲ್ಲ ಎಂದು ಟೀಕಿಸಿದರು.
ಶೇ. 5 ಹಾಗೂ ಶೇ. 18ರ ದರದಲ್ಲಿ ಜಿಎಸ್‌ಟಿ ಸ್ಲ್ಯಾಬ್ ನಿಗದಿಪಡಿಸಲಾಗಿದೆ. ಈ ವಿನಾಯಿತಿಯಿಂದ ಜನರ ಕೈಯಲ್ಲಿ 1 ರಿಂದ 1.5 ಲಕ್ಷ ಕೋಟಿ ರೂ. ಉಳಿತಾಯವಾಗಲಿದೆ. ತೆರಿಗೆ ಕಡಿಮೆ ಮಾಡಿದರೆ ಗ್ರಾಹಕರು ಖರ್ಚು ಜಾಸ್ತಿ ಮಾಡುತ್ತಾರೆ. ಇದರಿಂದ ಉತ್ಪಾದಕತೆ ಹೆಚ್ಚಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಬದಲಾವಣೆಯಿಂದ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದಲ್ಲಿ ಶೇ. 0.3ರಿಂದ 0.6 ರಷ್ಟು ವೃದ್ಧಿಯಾಗಲಿದೆ ಎಂದು ಎಸ್‌ಅಂಡ್‌ಪಿ ರೇಟಿಂಗ್ ಏಜೆನ್ಸಿ ಅಂದಾಜಿಸಿದೆ ಎಂದು ತಿಳಿಸಿದರು.
30 ಟ್ರಿಲಿಯಲ್ ಡಾಲರ್ ಸಂಕಲ್ಪ: ಜಿಎಸ್‌ಟಿಯಲ್ಲಿ ತರಲಾದ ಸುಧಾರಣೆಯು ವಿಕಸಿತ ಭಾರತಕ್ಕೆ ಶಕ್ತಿ ನೀಡಲಿದೆ. ಯುಪಿಎ ಸರ್ಕಾರದ ಕಾಲಕ್ಕೆ ಹೋಲಿಸಿದರೆ ಕರೊನಾ ಮಹಾಮಾರಿ, ಎರಡು ಯುದ್ಧಗಳು, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಡುವೆಯೂ ಪ್ರಧಾನಿ ಮೋದಿ ಅವರ ಅವಧಿಯಲ್ಲಿ ದೇಶದ ಆರ್ಥಿಕತೆ ಸುಧಾರಿಸಿದೆ. ವಿಶ್ವದ 4ನೇ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. 2047ರ ವೇಳೆಗೆ ದೇಶದ ಆರ್ಥಿಕತೆ 30 ಟ್ರಿಲಿಯನ್ ಡಾಲರ್‌ಗೆ ಮುಟ್ಟಿಸುವ ಸಂಕಲ್ಪ ನಮ್ಮದಾಗಿದೆ ಎಂದು ಜೋಶಿ ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, 2017ರಲ್ಲಿ ಜಿಎಸ್‌ಟಿ ಜಾರಿಗೆ ತಂದಾಗ ವಿರೋಧ ವ್ಯಕ್ತವಾಗಿದ್ದವು. ಅದರಿಂದ ದೇಶಕ್ಕೆ ಹೇಗೆ ಅನುಕೂಲವಾಯಿತು ಎನ್ನುವುದು ಜನರಿಗೆ ಗೊತ್ತಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿ, ಸುಮಾರು 28 ಸರಕುಗಳ ಮೇಲಿನ ಜಿಎಸ್‌ಟಿ ದರದಲ್ಲಿ ಇಳಿಕೆಯಾಗಿದೆ. ಇದನ್ನು ಈ ಹಿಂದೆಯೇ ಮಾಡಬೇಕಿತ್ತು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ಅವರು ಮಾಡಿದ ಆರ್ಥಿಕ ಹೊರೆಯನ್ನು ಪ್ರಧಾನಿ ಮೋದಿ ಇಳಿಸಿದ್ದಾರೆ ಎಂದು ಹೇಳಿದರು.