ಹುಬ್ಬಳ್ಳಿ: ರಾಜಭವನವನ್ನು ಲೋಕಭವನ ಎಂದು ಮರುನಾಮಕರಣ ಮಾಡಲು ಸರ್ಕಾರದ ಒಪ್ಪಿಗೆ ಇಲ್ಲ. ಅದು ಕೇಂದ್ರ ಗೃಹ ಸಚಿವಾಲಯದ ನಿರ್ಧಾರ ಆಗಿರಬಹುದು. ರಾಜ್ಯಪಾಲರ ಅನುಮೋದನೆಯೊಂದಿಗೆ ಇದು ಜಾರಿಯಾಗಿದೆ. ರಾಜಭವನ ಲೋಕಭವನವಾಗಲು ಹೇಗೆ ಸಾಧ್ಯ? ಆಡಳಿತಾತ್ಮಕ ದೃಷ್ಟಿಯಿಂದಲೂ ಇದು ಸರಿಯಾದುದಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಭವನವನ್ನು ಲೋಕಭವನ ಎಂದು ನಾಮಕರಣ ಮಾಡಲು ಸಚಿವ ಸಂಪುಟದಲ್ಲಿ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಕೇಂದ್ರದ ಈ ನಿರ್ಧಾರವನ್ನು ನಾವು ಒಪ್ಪಲ್ಲ ಎಂದರು.
ಅಧಿಕಾರ ಹಂಚಿಕೆ ವಿಚಾರದ ಸಮಸ್ಯೆ ಕಾಂಗ್ರೆಸ್‌ನಲ್ಲಿ ಇಲ್ಲ. ಆದರೂ ಸಮಸ್ಯೆ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಈ ವಿಚಾರವಾಗಿ ಗಂಭೀರವಾಗಿ ಚರ್ಚೆ ಮಾಡಿದ್ದಾರೆ. ಸಮಸ್ಯೆ ಇದ್ದರೆ ಅಧಿವೇಶನ ನಂತರ ಬಗೆಹರಿಯುತ್ತದೆ. ಎಲ್ಲರೂ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದರು.


















