ಹುಬ್ಬಳ್ಳಿ: ನಗರದ ಮರಾಠಗಲ್ಲಿಯಲ್ಲಿರುವ ಮೆಟ್ರೋ ಮಾಲ್‌ನಲ್ಲಿ ತಡರಾತ್ರಿ ಭಾರೀ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಗುರುವಾರ ತಡರಾತ್ರಿ ಮೂರು ಅಂತಸ್ತಿನ ಈ ವಾಣಿಜ್ಯ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಮಾಹಿತಿಯ ಪ್ರಕಾರ, ತಡರಾತ್ರಿ ವಿದ್ಯುತ್ ಹೋಗಿ ಮತ್ತೆ ಬಂದ ಕೆಲವೇ ಸಮಯದೊಳಗೆ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಮಾಲ್‌ನೊಳಗೆ ಇದ್ದ ಬಟ್ಟೆ ಅಂಗಡಿಗಳು, ಶೂ ಮತ್ತು ಚಪ್ಪಲಿ ಸೇರಿದಂತೆ ವಿವಿಧ ವಸ್ತುಗಳ ಅಂಗಡಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ಇದನ್ನೂ ಓದಿ: ಕ್ರಾಸಿಂಗ್‌ನಲ್ಲಿ ನಿಂತಿದ್ದ ಟ್ರಕ್‌ಗೆ ರೈಲು ಡಿಕ್ಕಿ: ವಿಡಿಯೋ ವೈರಲ್
ಬೆಂಕಿ ತಗುಲಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದರಿಂದ ಬೆಂಕಿ ಸುತ್ತಮುತ್ತಲಿನ ಕಟ್ಟಡಗಳಿಗೆ ಹರಡದಂತೆ ತಡೆಯಲು ಸಾಧ್ಯವಾಯಿತು.
ಘಟನೆ ನಡೆದ ಸಮಯದಲ್ಲಿ ಮಾಲ್‌ನಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯವಾಗಿದೆ. ಆದರೂ ಬೆಂಕಿಯಿಂದ ಮಾಲ್‌ನ ಒಳಭಾಗದ ಮೂಲಸೌಕರ್ಯ, ವಾಣಿಜ್ಯ ವಸ್ತುಗಳು ಮತ್ತು ವಿದ್ಯುತ್ ಉಪಕರಣಗಳಿಗೆ ಭಾರೀ ಹಾನಿಯಾಗಿದೆ.
ಇದನ್ನೂ ಓದಿ: ಸರ್ಕಾರಕ್ಕೆ ನಿಧಿ ನೀಡಿದ ಕುಟುಂಬಕ್ಕೆ ಪಂಚಾಯತನಿಂದ ನಿವೇಶನ
ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಂಯುಕ್ತವಾಗಿ ಪ್ರಾಥಮಿಕ ತನಿಖೆ ಕೈಗೊಂಡಿವೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಏನು, ಹಾನಿಯ ಒಟ್ಟು ಪ್ರಮಾಣ ಎಷ್ಟು ಎಂಬುದರ ಕುರಿತು ಮಾಲ್ ಮಾಲೀಕರು ಹಾಗೂ ಅಧಿಕಾರಿಗಳು ವಿವರಗಳನ್ನು ಪರಿಶೀಲಿಸಿದ ನಂತರ ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ನಗರದಲ್ಲಿ ತಡರಾತ್ರಿ ನಡೆದ ಈ ಬೆಂಕಿ ಅವಘಡವು ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಅಗತ್ಯತೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ.





















