ಹುಬ್ಬಳ್ಳಿ: ಪೊಲೀಸರು ಮಹಿಳೆಯೊಬ್ಬರ ಮೇಲೆ ಅಮಾನುಷವಾಗಿ ನಡೆದುಕೊಂಡಿರುವುದು ಖಂಡನೀಯ. ಕಾಂಗ್ರೆಸ್ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಹಾಗೂ ಘಟನೆಗೆ ಸಂಬಂಧಿಸಿ ಎಲ್ಲ ಪೊಲೀಸ್ ಸಿಬ್ಬಂದಿಯನ್ನು ಬಂಧಿಸುವರೆಗೂ ಹೋರಾಟ ನಡೆಸಲಾಗುವುದು ಎಂದು ಮೇಯರ್ ಜ್ಯೋತಿ ಪಾಟೀಲ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಅವಮಾನ ಮಾಡಿದ್ದಾರೆ. ಮಹಿಳೆಯರಿಗೆ ರಕ್ಷಣೆ ಕೊಡಬೇಕಾದ ಪೊಲೀಸರೇ ಈ ರೀತಿ ಮಾಡಿದ್ದಾರೆ. ತಾಯಿ, ತಂಗಿ, ಸಹೋದರಿ ರೂಪದಲ್ಲಿ ನೋಡುವ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದರು.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್
ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದರೆ ಪೊಲೀಸ್ ಇಲಾಖೆ ಏನು ಮಾಡುತ್ತಿದೆ. ಪೊಲೀಸರ ಮೇಲೆ ಯಾರ ಒತ್ತಡವಿದೆ? ಪಾಲಿಕೆ ಸದಸ್ಯರ ಮಾತು ಕೇಳಿ ಈ ರೀತಿ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಮಹಿಳೆ ರಕ್ಷಣೆಯನ್ನು ಮರೆತಿದೆ. ಪೊಲೀಸರ ಮೇಲೆ ಹಾಗೂ ಕಾಂಗ್ರೆಸ್ ಸದಸ್ಯರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಗಲಾಟೆಗೆ ಎಸ್‌ಐಆರ್ ಸರ್ವೆ ನೆಪ ಮಾತ್ರ. ನಕಲಿ ಮತದಾರರ ಕಂಡು ಹಿಡಿಯಲಾಗುತ್ತಿದೆ. ಅದನ್ನು ಅನ್ಯತಾ ಭಾವಿಸಿ ಆಕ್ಷೇಪ ಮಾಡುವುದು ಸರಿಯಲ್ಲ. ಗಲಾಟೆ ನಡೆದ ಪ್ರದೇಶದಲ್ಲಿ ಅನೇಕ ನಕಲಿ ಮತದಾರರು ಇದ್ದಾರೆ. ಈ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.









