ಹುಬ್ಬಳ್ಳಿ: ಪ್ರಹ್ಲಾದ್ ಜೋಶಿ ಅವರು ಆಟೋ ಚಾಲಕರು ಗ್ಯಾಸ್ ಬಿಟ್ಟು ಪೆಟ್ರೋಲ್ ಬಳಸಬೇಕು ಎಂಬ ಸಲಹೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿದ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ರಾಜ್ಯದ ಹಿತಾಸಕ್ತಿಗೆ ಸಹಾಯ ಮಾಡುವ ಬದಲು, ಕೇಂದ್ರ ನಾಯಕರು ದಕ್ಷಿಣ ಭಾರತದ ಕಡೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಇಂಧನ ವಿಚಾರದಲ್ಲಿ ಆರೋಪ-ಪ್ರತ್ಯಾರೋಪ: ಪ್ರಹ್ಲಾದ್ ಜೋಶಿ ಅವರು ಆಟೋ ಚಾಲಕರು ಗ್ಯಾಸ್ ಬಿಟ್ಟು ಪೆಟ್ರೋಲ್ ಬಳಸಬೇಕು ಎಂಬ ಸಲಹೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, “ಭಾರತಕ್ಕೆ ಬಂದ ಎಲ್‌ಪಿಜಿ ತುಂಬಿದ ಎರಡು ಹಡಗುಗಳನ್ನು ಗುಜರಾತ್‌ಗೆ ಕಳುಹಿಸಲಾಗಿದೆ. ಕರ್ನಾಟಕ ಅಥವಾ ಕೇರಳಕ್ಕೆ ಯಾಕೆ ಕಳುಹಿಸಲಿಲ್ಲ?” ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಉತ್ತರ ಭಾರತದತ್ತ ಹೆಚ್ಚು ಗಮನ ಹರಿಸುತ್ತಿದ್ದು, ದಕ್ಷಿಣ ರಾಜ್ಯಗಳ ಅಗತ್ಯಗಳನ್ನು ಕಡೆಗಣಿಸುತ್ತಿದೆ ಎಂದು ಅವರು ಕಿಡಿಕಾರಿದರು.
ಉಪಚುನಾವಣೆ – ಕಾಂಗ್ರೆಸ್ ಗೆಲುವಿನ ವಿಶ್ವಾಸ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, “ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಖಚಿತವಾಗಿ ಗೆಲ್ಲುತ್ತಾರೆ. ನಮ್ಮ ಗ್ಯಾರಂಟಿ ಯೋಜನೆಗಳು ಮತ್ತು ಆಡಳಿತದಿಂದ ಜನ ತೃಪ್ತರಾಗಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಯಕತ್ವ ಬದಲಾವಣೆ ಚರ್ಚೆ: ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿರುವ ನಾಯಕತ್ವ ಬದಲಾವಣೆ ಪ್ರಶ್ನೆಗೆ ಉತ್ತರಿಸಿದ ಅವರು, “ನಾಯಕತ್ವ ಬದಲಾವಣೆ ಬಗ್ಗೆ ನಿಮಗ್ಯಾಕೆ ಸಮಸ್ಯೆ? ಕಾಲವೇ ಎಲ್ಲಕ್ಕೂ ಉತ್ತರ ಕೊಡುತ್ತದೆ. ಸರಿಯಾದ ಸಮಯ ಬಂದಾಗ ನಾನು ಮಾತನಾಡುತ್ತೇನೆ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು. , “ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಮತ್ತು ನಾನು ಮಾತ್ರ ಅಂತಿಮವಾಗಿ ಹೇಳಬೇಕು. ಬೇರೆ ಯಾರ ಮಾತಿಗೂ ಪ್ರಾಮುಖ್ಯತೆ ಇಲ್ಲ” ಎಂದು ಸ್ಪಷ್ಟಪಡಿಸಿದರು.























