ಧಾರವಾಡ: ವಿವಿಧ ಇಲಾಖೆಗಳಲ್ಲಿ ಮತ್ತು ಪೊಲೀಸ್ ಇಲಾಖೆಯಲ್ಲಿ ಪಿಸಿ, ಪಿಎಸ್‌ಐ ಇತ್ಯಾದಿ ಸೇರಿದಂತೆ ವಯೋಮಿತಿ ಹೆಚ್ಚಿಸಿ ನೇಮಕಾತಿ ಆರಂಭಿಸುವಂತೆ ಆಗ್ರಹಿಸಿ ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಶನ್ ವತಿಯಿಂದ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಧಾರವಾಡದ ಶ್ರೀನಗರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ಸುಮಾರು 5 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಸಪ್ತಾಪುರ, ಕಾಲೇಜು ರಸ್ತೆ ಮಾರ್ಗವಾಗಿ ಆಲೂರು ವೆಂಕಟರಾವ್ ವೃತ್ತಕ್ಕೆ ಬಂದು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಾರಿಯುದ್ದಕ್ಕೂ ಗೃಹ ಸಚಿವ ಡಾ. ಜಿ. ಪರಮೇಶ್ವರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ವಿವಿಧ ಸಚಿವರ ಭಾವಚಿತ್ರಗಳಿಗೆ ಚಪ್ಪಲಿ ಹಾಕಿ ಖಂಡಿಸಿದರು.
ಕೆಲವು ವರ್ಷಗಳೇ ಕಳೆದರೂ ಇಲ್ಲಿಯವರೆಗೆ ಯಾವುದೇ ನೇಮಕಾತಿ ಇಲ್ಲದೇ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಸಂಸ್ಥೆಗಳು ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ ಆಗದೇ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಏಳು ಎಂಟು ವರ್ಷಗಳಿಂದ ಎಫ್‌ಡಿಎ, ಎಸ್‌ಡಿಎ, ಪಶು ವೈದ್ಯರು, ಲ್ಯಾಂಡ್ ಸರ್ವೇ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಸುಮಾರು 3 ಲಕ್ಷ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಮಾಡಿಲ್ಲ ಎಂದು ಕಿಡಿಕಾರಿದರು.
ಈ ಬಾರಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯ ಅನುವಾದದಲ್ಲಿ ಸಾಕಷ್ಟು ತಪ್ಪುಗಳಿದ್ದು, ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದರು. ಆದ್ದರಿಂದ ಇದನ್ನು ರದ್ಧುಪಡಿಸಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಮೂರು ಗಂಟೆ ಟ್ರಾಫಿಕ್ ಜಾಮ್: ಶ್ರೀನಗರ ವೃತ್ತದಿಂದ ಜ್ಯುಬಿಲಿ ವೃತ್ತದವರೆಗೆ ಪಾದಯಾತ್ರೆ ಮೂಲಕ ಅಭ್ಯರ್ಥಿಗಳು ಆಗಮಿಸಿದ್ದು, ಈ ಸಂದರ್ಭದಲ್ಲಿ ವಾಹನ ಸವಾರರಿಗೆ ಸಾಕಷ್ಟು ತೊಂದರೆ ಉಂಟಾಯಿತು. ಮೂರು ಗಂಟೆ ಟ್ರಾಫಿಕ್ ಜಾಮ್ ಆಗಿ ಪರದಾಡಬೇಕಾಯಿತು. ಬೆರಳೆಣಿಕೆಯಷ್ಟು ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ಗಾಗಿ ನಿಯೋಜನೆ ಮಾಡಿದ್ದು ಪೊಲೀಸ್ ಇಲಾಖೆ ವೈಫಲ್ಯತೆ ಎತ್ತಿ ತೋರಿಸಿದಂತಿತ್ತು.
ಪುಡಾರಿಗಳ ದುಂಡಾವರ್ತನೆ: ವಿದ್ಯಾರ್ಥಿಗಳು ಹಾಗೂ ನೌಕರಿ ಆಕಾಂಕ್ಷಿಗಳು ನಡೆಸಿದ ರ‍್ಯಾಲಿಯಲ್ಲಿ ಕೆಲ ಪುಡಾರಿಗಳು ಸೇರಿಕೊಂಡು ಅನುಚಿತವಾಗಿ ವರ್ತಿಸಿದ ಘಟನೆಗಳೂ ನಡೆದವು. ಜುಬಿಲಿ ವೃತ್ತದಲ್ಲಿ ಪ್ರತಿಭಟನಾಕಾರರು ಎಲ್ಲ ರಾಜಕಾರಣಿಗಳ ಬ್ಯಾನರ್ ತೆರವುಗೊಳಿಸಲು ಮುಂದಾದಾಗ ಪುಡಾರಿಗಳು ಆ ಬ್ಯಾನರ್ ಹರಿದು ಕಾಲಲ್ಲಿ ತುಳಿದರು. ಚಿತ್ರಗಳನ್ನು ಸೆರೆಹಿಡಿಯಲು ಹೋದವರೊಂದಿಗೆ ಗೂಂಡಾವರ್ತನೆ ತೋರಿದರು. ಈ ಮಧ್ಯೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡುತ್ತಿರುವಾಗ ಅವರ ಮುಂದೆಯೇ ಗೃಹ ಸಚಿವರ ಮತ್ತು ಶಿಕ್ಷಣ ಸಚಿವರ ಭಾವಚಿತ್ರಗಳಿಗೆ ಚಪ್ಪಲಿ ಜೋತುಬಿಟ್ಟ, ಹೊಡೆದ ಕೆಲ ಪುಡಾರಿಗಳು ದುಂಡಾವರ್ತನೆ ತೋರಿದರು. ಆದರೆ ಈ ಸಂದರ್ಭದಲ್ಲಿ ಇದನ್ನು ತಡೆಯಬೇಕಿದ್ದ ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಂತೆ ನಿಂತಿದ್ದರು.