ದಾವಣಗೆರೆ: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮೂರುವರೆ ವರ್ಷದ ಬಾಲಕ ಹಿತಾರ್ಥ್ ಅವರ ಕನಸನ್ನು ನನಸುಗೊಳಿಸಿದ ಅಪರೂಪದ ಹೃದಯಸ್ಪರ್ಶಿ ಘಟನೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಮಗನನ್ನು ಪೊಲೀಸ್ ಅಧಿಕಾರಿ ಆಗಿ ನೋಡಬೇಕೆಂಬ ತಂದೆಯ ಆಸೆಗೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್ ಟಿ ಅವರು, ಖಾಕಿ ಯೂನಿಫಾರ್ಮ್ ಧರಿಸಿ ಬಂದ ಪುಟ್ಟ ಬಾಲಕನನ್ನು ತಮ್ಮ ಕುರ್ಚಿಯಲ್ಲಿ ಕೂರಿಸಿ “ಎಸ್‌ಪಿ” ಆಗುವ ಅವಕಾಶ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ದೃಶ್ಯ ಕಂಡು ಅಲ್ಲಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾವುಕರಾದರು.
ಇದನ್ನೂ ಓದಿ: ಕೋಲಾರ: ದೇಶದ ಮೊದಲ ಟಾಟಾ–ಎರ್‌ಬಸ್ ಹೆಲಿಕಾಪ್ಟರ್ ಘಟಕಕ್ಕೆ ಇಂದು ಐತಿಹಾಸಿಕ ಚಾಲನೆ
ಒಂದೂವರೆ ವರ್ಷದಲ್ಲೇ ರಕ್ತದ ಕ್ಯಾನ್ಸರ್ ಪತ್ತೆ: ಹಿತಾರ್ಥ್ ಎಂಬ ಬಾಲಕ, ಹೊನ್ನಾಳಿ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಪ್ರಭು ಮತ್ತು ಅನುಷಾ ದಂಪತಿಯ ಎರಡನೇ ಪುತ್ರ. ಒಂದೂವರೆ ವರ್ಷದ ವಯಸ್ಸಿನಲ್ಲಿಯೇ ಮಗುವಿಗೆ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ನಿರಂತರ ಚಿಕಿತ್ಸೆ ಪಡೆಯುತ್ತಿದ್ದ ಹಿತಾರ್ಥ್, ಕಳೆದ ಎಂಟು ತಿಂಗಳು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸತತ ಚಿಕಿತ್ಸೆ ಪಡೆದಿದ್ದಾನೆ.
ಚಿಕಿತ್ಸೆಯ ಫಲವಾಗಿ ಈಗಾಗಲೇ ಶೇಕಡಾ 80ರಷ್ಟು ಚೇತರಿಕೆ ಕಂಡಿದ್ದರೂ, ಮಗುವಿನ ಆರೋಗ್ಯದ ಬಗ್ಗೆ ಪಾಲಕರ ಮನಸ್ಸು ಇನ್ನೂ ಆತಂಕದಿಂದಲೇ ಇದೆ.
ಇದನ್ನೂ ಓದಿ: ಕೋಲಾರ: ಖಾಸಗಿ ಬಸ್ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ, 40ಕ್ಕೂ ಹೆಚ್ಚು ಮಂದಿಗೆ ಗಾಯ
ಮಗನನ್ನು ಪೊಲೀಸ್ ಮಾಡಬೇಕೆಂಬ ತಂದೆಯ ಕನಸು: ಬಾಲಕನ ತಂದೆ ಪ್ರಭು ಅವರಿಗೆ ಬಾಲ್ಯದಿಂದಲೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆ ಇತ್ತು. ಆದರೆ ಆ ಕನಸು ಈಡೇರಿರಲಿಲ್ಲ. ಹಿತಾರ್ಥ್ ಹುಟ್ಟಿದ ದಿನದಿಂದಲೇ “ನನ್ನ ಮಗ ಪೊಲೀಸ್ ಅಧಿಕಾರಿ ಆಗಬೇಕು” ಎಂಬ ಕನಸು ಅವರ ಮನಸ್ಸಿನಲ್ಲಿ ಮೂಡಿತ್ತು. ಆದರೆ ಮಗುವಿಗೆ ರಕ್ತದ ಕ್ಯಾನ್ಸರ್ ಇದೆ ಎಂಬ ಸುದ್ದಿ ತಿಳಿದಾಗ ತಂದೆ–ತಾಯಿಯ ಹೃದಯ ನುಚ್ಚು ನೂರಾಗಿತ್ತು. ಆದರೂ ಮಗನನ್ನು ಒಮ್ಮೆ ಖಾಕಿ ಉಡುಪಿನಲ್ಲಿ ನೋಡಬೇಕೆಂಬ ಆಸೆಯನ್ನು ಅವರು ಕೈಬಿಡಲಿಲ್ಲ.
ಹೀಗಾಗಿ ಮಗುವಿಗೆ ಪೊಲೀಸ್ ಯೂನಿಫಾರ್ಮ್ ಧರಿಸಿ, ಜಿಲ್ಲಾ ಪೊಲೀಸ್ ಕಚೇರಿಗೆ ಕರೆದುಕೊಂಡು ಬಂದರು.
ಇದನ್ನೂ ಓದಿ: ಕಾಳಿ ನದಿ ನೀರಾವರಿ ಯೋಜನೆ ಅಂತಿಮ ಹಂತ: ಹಳಿಯಾಳ ರೈತರಿಗೆ ಶೀಘ್ರ ನೀರು
SPಯ ಮಾನವೀಯ ನಡೆಗೆ ಪ್ರಶಂಸೆ: ಪರಿಸ್ಥಿತಿಯನ್ನು ಅರಿತ ಎಸ್ಪಿ ಶೇಖರ್ ಹೆಚ್.ಟಿ. ಅವರು ಹಿತಾರ್ಥ್‌ಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ತಮ್ಮ ಕುರ್ಚಿಯಲ್ಲಿ ಕುಳ್ಳಿರಿಸಿ ಕೆಲಕಾಲ “ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ” ಆಗುವ ಅವಕಾಶ ನೀಡಿದರು.
ಪುಟ್ಟ ಮಗು ನಗುಮುಖದಿಂದ ಕುರ್ಚಿಯಲ್ಲಿ ಕುಳಿತ ದೃಶ್ಯ ಎಲ್ಲರ ಮನಸ್ಸು ತಟ್ಟಿತು. ಈ ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಬಾಲಕನ ಕನಸಿಗೆ ಚಿಗುರುಕೊಟ್ಟ ಈ ಘಟನೆ ಮಾನವೀಯತೆಗೆ ಮಾದರಿಯಾಗಿ ಮೂಡಿಬಂದಿದೆ.























