ಹುಬ್ಬಳ್ಳಿ: ರಾಜ್ಯಪಾಲರನ್ನು ತಮಗೆ ಅನುಕೂಲಕ್ಕೆ ತಕ್ಕಂತೆ ದುರುಪಯೋಗ ಮಾಡಿಕೊಂಡು ಬಂದವರು ಕಾಂಗ್ರೆಸ್‌ನವರೇ ಹೊರತು ಬಿಜೆಪಿಯವರಲ್ಲ. ಇಂದಿರಾ ಗಾಂಧಿ ಕಾಲದಿಂದ ದೇಶದಲ್ಲಿ 90 ಬಾರಿ ರಾಷ್ಟ್ರಪತಿ ಆಡಳಿತ ಹೇರಿದ ಕೀರ್ತಿ ಕಾಂಗ್ರೆಸ್‌ನವರದು. ಅವರಿಂದ ಪಾಠ ಕಲಿಬೇಕಿಲ್ಲ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಭೈರಿದೇವರಕೊಪ್ಪ ಗ್ರಾಮದ ಶಿವಾನಂದಮಠ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ತಮಿಳುನಾಡು, ಕೇರಳ ಈಗ ಕರ್ನಾಟಕದಲ್ಲಿ ರಾಜ್ಯಪಾಲರ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಕಾಂಗ್ರೆಸ್‌ನವರು ಹೇಗೆ ಅಧಿಕಾರ ದುರುಪಯೋಗ ಮಾಡಿಕೊಂಡು ಬಂದರು, 90 ಬಾರಿ ರಾಷ್ಟ್ರಪತಿ ಆಡಳಿತವನ್ನು ದೇಶದಲ್ಲಿ ಹೇರಿದ್ದು ಯಾರು ಎಂಬುದು ಗೊತ್ತಾಗುತ್ತದೆ ಎಂದು ಕುಟುಕಿದರು.
ಮನರೇಗಾ ಕಾಂಗ್ರೆಸ್‌ನವರು ಜಾರಿಗೊಳಿಸಿದ್ದು ದುಡ್ಡು ಹೊಡೆಯುವ ಕಾರ್ಯಕ್ರಮ. ಕಾಂಗ್ರೆಸ್ ಕಾರ್ಯಕರ್ತರ ಜೇಬು ತುಂಬಿಸುವ ಯೋಜನೆಯಾಗಿತ್ತು. ಈಗ ಜಿ ರಾಮ್ ಜಿ ಜಾರಿಯಾಗುವುದರಿಂದ ಅದಕ್ಕೆ ಅವಕಾಶವಿಲ್ಲ. ಅದಕ್ಕಾಗಿ ಕಾಂಗ್ರೆಸ್‌ನವರ ಆಕ್ಷೇಪ. 100 ದಿನದ ಬದಲು 125 ದಿನಕ್ಕೆ ಹೆಚ್ಚಿಸಲಾಗಿದೆ. ಕೂಲಿ ಮೊತ್ತ ಹೆಚ್ಚಳ ಮಾಡಲಾಗಿದೆ. ಪಾರದರ್ಶಕತೆ ನಿಯಮಗಳ ಕಟ್ಟುನಿಟ್ಟು ಜಾರಿ ಅಂಶಗಳಿವೆ. ಇದನ್ನು ಸಹಿಸಲು ಆಗುತ್ತಿಲ್ಲ ಕಾಂಗ್ರೆಸ್‌ನವರಿಗೆ. ಕೇಂದ್ರ ಸರ್ಕಾರ ಶೇ. 60 ಅನುದಾನ ಕೊಟ್ಟರೆ ರಾಜ್ಯ ಸರ್ಕಾರ ಶೇ. 40 ರಷ್ಟು ತನ್ನ ಪಾಲು ಕೊಡಬೇಕಾಗುತ್ತದೆ. ಜನರ ಅಭಿವೃದ್ಧಿ ಯೋಜನೆ ಜಾರಿಯಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಇರುತ್ತದೆ ಎಂದು ಹೇಳಿದರು.





















