ಹುಬ್ಬಳ್ಳಿ: ದೆಹಲಿಯಲ್ಲಿ ಸೋಮವಾರ ರಾತ್ರಿ ಸ್ಫೋಟ ನಡೆದ ಹಿನ್ನೆಲೆಯಲ್ಲಿ, ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ವಿವಿಧಡೆ ತಪಾಸಣೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ನಗರದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಉಪನಗರ ಸಾರಿಗೆ ನಿಲ್ದಾಣ, ಗೋಕುಲ ರಸ್ತೆ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚನ್ನಮ್ಮ ವೃತ್ತ, ಡಾಕಪ್ಪ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳು ಹಾಗೂ ಧಾರ್ಮಿಕ ಸ್ಥಳಗಳ ಸುತ್ತಲು ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ನಗರ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಹಾಗೂ ಒಳ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ, ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ನಗರದ ರೈಲ್ವೆ ನಿಲ್ದಾಣದಲ್ಲಿ ಶ್ವಾನದಳ ಪ್ರಯಾಣಿಕರ ಸಾಮಗ್ರಿಗಳನ್ನು ಹಾಗೂ ರೈಲ್ವೆ ಆವರಣದ ಸುತ್ತಲೂ ಪರಿಶೀಲನೆ ನಡೆಸಿತು. ವಿಮಾನ ನಿಲ್ದಾಣದ ಸುತ್ತಮುತ್ತಲು ಸಹ ಬಾಂಬ್ ಪತ್ತೆ ದಳ ಹಾಗೂ ಕ್ಷಿಪ್ರ ಕಾರ್ಯಾಚರಣೆ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಅಲ್ಲದೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿದರು.

























