ಧಾರವಾಡ: ಈ ಹಿಂದೆ ಸ್ಥಗಿತಗೊಂಡಿದ್ದ ಧಾರವಾಡದ ಆಧಾರ್ ಸೇವಾ ನಿರ್ವಹಣಾ ಕೇಂದ್ರವನ್ನು ಪುನಃ ಆರಂಭಿಸುವ ಕುರಿತಾಗಿ ಧಾರವಾಡ ಜಿಲ್ಲೆಯ ಜನತೆಗೆ ಕೇಂದ್ರ ಸಚಿವ ಹಾಗೂ ಈ ಭಾಗದ ಸಂಸದರಾದ ಪ್ರಲ್ಹಾದ್ ಜೋಶಿ ಅವರು ಮಹತ್ವದ ಸಿಹಿಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಧಾರವಾಡ ನಗರದಲ್ಲಿ ಆಧಾರ್ ಸೇವಾ ನಿರ್ವಹಣಾ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಲ್ಹಾದ್ ಜೋಶಿ ಅವರು, ರಾಜ್ಯದಲ್ಲಿ ಈ ಹಿಂದೆ ಕೇವಲ ಆರು ಜಿಲ್ಲೆಗಳಲ್ಲಿ ಮಾತ್ರ ಆಧಾರ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ರಾಜ್ಯದ ಹೆಚ್ಚಿನ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರತಿ ಜಿಲ್ಲೆಗೆ ಒಂದರಂತೆ ಒಟ್ಟು 19 ಹೊಸ ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಿತು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ರೆಡ್ಡಿ ಬಣಗಳ ಮಧ್ಯೆ ಘರ್ಷಣೆ: ಬಳ್ಳಾರಿ ಎಸ್ಪಿ ತಲೆದಂಡ
ಜಿಲ್ಲೆಗೆ ಒಂದೇ ಕೇಂದ್ರ ಎಂಬ ಹೊಸ ನಿಯಮ ಜಾರಿಗೆ ಬಂದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಆಧಾರ್ ಸೇವಾ ಕೇಂದ್ರ ಮುಂದುವರಿದರೂ, ಧಾರವಾಡದಲ್ಲಿದ್ದ ಕೇಂದ್ರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಧಾರವಾಡ ಜಿಲ್ಲೆಯ ನಾಗರಿಕರಿಗೆ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ಇತರ ಸೇವೆಗಳಿಗೆ ಹುಬ್ಬಳ್ಳಿ ತೆರಳುವ ಅನಿವಾರ್ಯತೆ ಎದುರಾಗಿತ್ತು.
ಈ ಸಮಸ್ಯೆಯನ್ನು ಮನಗಂಡು, ಧಾರವಾಡದ ಆಧಾರ್ ಕೇಂದ್ರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮರುಪ್ರಾರಂಭ ಮಾಡುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರಿಗೆ ನಾನು ಪತ್ರ ಬರೆದು ಮನವಿ ಸಲ್ಲಿಸಿದ್ದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಸಹ ಧಾರವಾಡದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಾಪನೆಗೆ ಬೆಂಬಲ ನೀಡಿ ವಿನಂತಿಸಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಗಲಾಟೆ: ನಾಲ್ಕು FIR, ರೆಡ್ಡಿ ಸೇರಿ ಹಲವರ ವಿರುದ್ಧ ದೂರು
ನನ್ನ ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು, ಧಾರವಾಡ ಜಿಲ್ಲೆಯಲ್ಲಿ ಆಧಾರ್ ಸೇವಾ ನಿರ್ವಹಣಾ ಕೇಂದ್ರ ಸ್ಥಾಪನೆ ಅಗತ್ಯವಿದೆ ಎಂಬುದನ್ನು ಮನಗಂಡು, ವಿಶೇಷ ಪ್ರಕರಣದಡಿ ಧಾರವಾಡದಲ್ಲಿಯೂ ಒಂದು ಆಧಾರ್ ಸೇವಾ ಕೇಂದ್ರ ಸ್ಥಾಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಧಾರವಾಡ ಆಧಾರ್ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆಗಾಗಿ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದ್ದು, ಲಕ್ಷಾಂತರ ನಾಗರಿಕರಿಗೆ ಈ ಸೇವೆ ಬಹುಮಾನವಾಗಲಿದೆ. ಆಧಾರ್ ಸಂಬಂಧಿತ ಸೇವೆಗಾಗಿ ಇನ್ನು ಮುಂದೆ ಧಾರವಾಡದ ಜನರು ದೂರದ ಪ್ರಯಾಣ ಮಾಡುವ ಅಗತ್ಯವಿಲ್ಲ.
ಧಾರವಾಡ ಜಿಲ್ಲೆಯ ಜನತೆಗೆ ಈ ಮಹತ್ವದ ಸೌಲಭ್ಯ ಒದಗಿಸಲು ಒಪ್ಪಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.























