ಧಾರವಾಡ: ಮಾಧ್ಯಮದ ಪ್ರತಿನಿಧಿಗಳು ಎಂದು ಹೇಳಿಕೊಂಡ ಕೆಲ ವ್ಯಕ್ತಿಗಳು ಪತ್ರಕರ್ತರ ಭೋಜನ ವ್ಯವಸ್ಥೆಗಾಗಿ ವಸತಿ ಸಚಿವ ಜಮೀರ್ ಅಹ್ಮದ್‌ಖಾನ್‌ರಿಂದ 2 ಲಕ್ಷ ರೂ. ಪಡೆದಿರುವುದು ಗೊತ್ತಾಗಿದೆ.
ಜ. 24ರಂದು ಹುಬ್ಬಳ್ಳಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರದ ಬೃಹತ್ ಕಾರ್ಯಕ್ರಮದ ಸಿದ್ಧತೆಗಾಗಿ ಸಚಿವ ಜಮೀರ್ ಅಹ್ಮದ್‌ಖಾನ್ ಧಾರವಾಡಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಸಚಿವ ಜಮೀರ್ ಅವರಿಂದ ಮಾಧ್ಯಮದ ಪ್ರತಿನಿಧಿಯೆಂದು ಹೇಳಿಕೊಂಡ ವ್ಯಕ್ತಿಗಳು ಧಾರವಾಡದ ಎಲ್ಲ ಪತ್ರಕರ್ತರಿಗೆ ಭೂರಿ ಭೋಜನದ ವ್ಯವಸ್ಥೆ ಮಾಡಿದರೆ, ಕಾರ್ಯಕ್ರಮಕ್ಕೆ ಒಳ್ಳೆಯ ಪ್ರಚಾರ ಸಿಗುತ್ತದೆ ಎಂದು ಹೇಳಿ ಕಾಂಗ್ರೆಸ್‌ನ ಯುವ ಮುಖಂಡರೊಬ್ಬರ ಮನೆಯಲ್ಲಿ ಸಚಿವರು ಊಟಕ್ಕೆ ಹೋದ ಸಂದರ್ಭದಲ್ಲಿ 2 ಲಕ್ಷ ರೂ. ಪಡೆದುಕೊಂಡಿದ್ದಾರೆಂದು ಹೇಳಲಾಗಿದೆ.
ಹಣ ಪಡೆಯುತ್ತಿರುವುದನ್ನು ಸಚಿವರ ಆತ್ಮೀಯರೊಬ್ಬರು ಫೋಟೊ ತೆಗೆದು ಮಾಧ್ಯಮದವರಿಗೆ ಕಳಿಸಿರುವುದರಿಂದ ಮಾಧ್ಯಮದವರಲ್ಲೇ ಗುದ್ದಾಟ ಶುರುವಾಗಿದೆ. ಮಂಗಳವಾರ ಸಚಿವ ಜಮೀರ್ ಅಹ್ಮದ್ ಖಾನ್ ಧಾರವಾಡದ ಸರ್ಕಿಟ್‌ಹೌಸ್‌ಗೆ ಬರುತ್ತಾರೆಂದು ಗೊತ್ತಾಗುತ್ತಿದ್ದಂತೆಯೇ ಕೆಲ ಮಾಧ್ಯಮದ ಪ್ರತಿನಿಧಿಗಳು ತಮಗೆ ಹಣ ತಲುಪಿಲ್ಲ ಎಂದು ಸಚಿವ ಖಾನ್ ಅವರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಣ ಕೊಡುವುದಿದ್ದರೆ ನಮಗೆ ಕೊಡಬೇಕಿತ್ತು, ಯಾರದೋ ಕೈಯಲ್ಲಿ ಕೊಟ್ಟರೆ ಹೇಗೆಂದು ಪ್ರಶ್ನಿಸಿದ್ದಾರೆ. ಮುನಿಸಿಕೊಂಡು ಬಂದಿದ್ದ ಮಾಧ್ಯಮದವರು ಸಚಿವರ ಭರವಸೆಯಿಂದ ನಗುಮುಖದೊಂದಿಗೆ ತೆರಳಿದ್ದಾರೆಂದು ಗೊತ್ತಾಗಿದೆ.
ಬಾಟಲ್ ಗಿಫ್ಟ್: ಇತ್ತೀಚೆಗೆ ಹೊಸ ವರ್ಷದ ಮುನ್ನಾದಿನ ಅಬಕಾರಿ ಸಚಿವರು ಧಾರವಾಡಕ್ಕೆ ಬಂದ ಸಂದರ್ಭದಲ್ಲಿ ಮಾಧ್ಯಮದವರೆಂದು ಹೇಳಿಕೊಂಡ ಕೆಲವರು ಸಚಿವರಿಂದ ನವ ವರ್ಷದ ಖುಷಿಗಾಗಿ ಮದ್ಯದ ಬಾಟಲ್‌ಗಳನ್ನು ಪಡೆದುಕೊಂಡಿದ್ದನ್ನು ಸ್ಮರಿಸಬಹುದು.























