ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜಯಂತಿ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ರಾಜಧಾನಿ ನವದೆಹಲಿಯಲ್ಲಿ ಇಂದು (ಡಿಸೆಂಬರ್ 25) ಮಹತ್ವದ ಸಾಮಾಜಿಕ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ನಗರದ ವಿವಿಧ ಭಾಗಗಳಲ್ಲಿ ಒಟ್ಟು 100 ಹೊಸ ‘ಅಟಲ್ ಕ್ಯಾಂಟೀನ್’ಗಳನ್ನು ಆರಂಭಿಸಲಾಗಿದ್ದು, ಇಲ್ಲಿ ಕೇವಲ ₹5ಕ್ಕೆ ಪೌಷ್ಟಿಕ ಆಹಾರ ಲಭ್ಯವಾಗಲಿದೆ.
ಲಾಜಪತ್ ನಗರದ ನೆಹರೂ ನಗರದಲ್ಲಿ ಸ್ಥಾಪಿಸಲಾದ ಮೊದಲ ಅಟಲ್ ಕ್ಯಾಂಟೀನ್ ಅನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, “ಯಾರೂ ಹಸಿವಿನಿಂದ ಮಲಗಬಾರದು ಎಂಬ ಆಶಯದೊಂದಿಗೆ ಈ ಯೋಜನೆ ಜಾರಿಗೆ ತರಲಾಗಿದೆ. ಇದು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಡವರ ಮೇಲಿದ್ದ ಅಪಾರ ಕಾಳಜಿಯನ್ನು ಸ್ಮರಿಸುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ‘ಡಿಜಿಟಲ್ ಡಿಟಾಕ್ಸ್’ಗೆ ಹಲಗಾ ಗ್ರಾಮಪಂಚಾಯತಿಯ ಮಾದರಿ ಹೆಜ್ಜೆ
ನಗರಾಭಿವೃದ್ಧಿ ಸಚಿವ ಆಶಿಷ್ ಸೂದ್ ಮಾತನಾಡಿ, ಭಾರತೀಯ ಜನತಾ ಪಕ್ಷ ನೀಡಿದ್ದ ಚುನಾವಣಾ ಭರವಸೆಯಂತೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ತಿಳಿಸಿದರು. ಪ್ರತಿಯೊಂದು ಅಟಲ್ ಕ್ಯಾಂಟೀನ್‌ನಲ್ಲಿ ದಿನಕ್ಕೆ ಸುಮಾರು 500 ಜನರಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇರಲಿದ್ದು, ಒಟ್ಟಾರೆ ದಿನಕ್ಕೆ ಸುಮಾರು ಒಂದು ಲಕ್ಷ ಜನರಿಗೆ ಆಹಾರ ಒದಗಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕ್ಯಾಂಟೀನ್‌ಗಳಲ್ಲಿ ರೊಟ್ಟಿ, ದಾಲ್, ತರಕಾರಿ, ಅನ್ನ ಮತ್ತು ಉಪ್ಪಿನಕಾಯಿ ಸೇರಿದಂತೆ ಪೌಷ್ಟಿಕಾಂಶ ಸಮೃದ್ಧ ಆಹಾರವನ್ನು ನೀಡಲಾಗುತ್ತದೆ. ಒಂದು ಊಟದ ನಿಜವಾದ ವೆಚ್ಚ ಸುಮಾರು ₹30 ಆಗಿದ್ದರೂ, ಸರ್ಕಾರದ ಭಾರಿ ಸಬ್ಸಿಡಿಯಿಂದ ಜನರಿಗೆ ಕೇವಲ ₹5ಕ್ಕೆ ಊಟ ಒದಗಿಸಲಾಗುತ್ತಿದೆ.
ಇದನ್ನೂ ಓದಿ: ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮುಖ್ಯ ರಸ್ತೆ, ಬಸ್ ನಿಲ್ದಾಣ, ಕಾರ್ಮಿಕ ಪ್ರದೇಶಗಳು ಹಾಗೂ ಜನಸಂದಣಿ ಹೆಚ್ಚಿರುವ ಸ್ಥಳಗಳ ಸಮೀಪ ಅಟಲ್ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿದ್ದು, ಇದರ ನಿರ್ವಹಣೆಯ ಜವಾಬ್ದಾರಿಯನ್ನು ದೆಹಲಿ ಅರ್ಬನ್ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್ (DUSIB) ವಹಿಸಿಕೊಂಡಿದೆ.
ಈ ಯೋಜನೆಯಿಂದ ದಿನಗೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಹಾಗೂ ಕಡಿಮೆ ಆದಾಯದ ವರ್ಗದ ಜನರಿಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಜನಪರ ಆಡಳಿತದ ನೆನಪಿನಲ್ಲಿ ಆರಂಭಗೊಂಡ ಈ ಯೋಜನೆ ದೆಹಲಿಯಲ್ಲಿ ಸಾಮಾಜಿಕ ಭದ್ರತೆಗೆ ಹೊಸ ಅಧ್ಯಾಯ ಬರೆಯಲಿದೆ.























