ದಾವಣಗೆರೆ: “ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳದ ಶಾಪ ಸರ್ಕಾರಕ್ಕೆ ತಟ್ಟುತ್ತೆ ಅನ್ನುವ ಕಾರಣಕ್ಕೆ ಆರೆಸ್ಸೆಸ್‌ನ ‘ನಮಸ್ತೆ ಸದಾ ವತ್ಸಲೆ’ ಗೀತೆ ಹಾಡಿ ನಾಟಕವಾಡುತ್ತಿದ್ದಾರೆ” ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕುಟುಕಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಡಿಕೆಶಿ ಒಬ್ಬ ಕಲಾಕಾರರು, ಕಲಾವಿದರು. ಅಲ್ಪಸಂಖ್ಯಾತರನ್ನು ಓಲೈಸುತ್ತಿರುವುದರಿಂದ ಹಿಂದೂಗಳು ದೂರವಾಗುತ್ತಿದ್ದಾರೆ ಎಂದು ಎಚ್ಚೆತ್ತು ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ” ಎಂದು ಲೇವಡಿ ಮಾಡಿದರು.
“ರಾಜ್ಯದಲ್ಲಿರುವುದು ವಿಕೃತ ಮನಸ್ಸಿನ ಸರ್ಕಾರ. ಈಗಾಗಲೇ ಸರ್ಕಾರ ದಿವಾಳಿಯಾಗಿದ್ದು, ಸರ್ಕಾರದಲ್ಲಿನ ಸಚಿವರ ಹಗರಣಗಳನ್ನ ಮುಚ್ಚಿ ಹಾಕಲು ಧರ್ಮಸ್ಥಳ, ಜಾತಿಗಣತಿ ವಿಷಯಗಳನ್ನ ಮುನ್ನಲೆಗೆ ತಂದು ಹಗರಣ ಮುಚ್ಚಿ ಹಾಕಲು ಯತ್ನಿಸುತ್ತಿದೆ” ಎಂದು ಆರೋಪಿಸಿದರು.
“ಅನಾಮಿಕ ತೆಗೆಸಿದ ಗುಂಡಿ ಮುಚ್ಚಲು ಕೂಡ ಸರ್ಕಾರದಲ್ಲಿ ಹಣವಿಲ್ಲ. ರಾಜ್ಯ ಸರ್ಕಾರ ಎಸ್‌ಐಟಿ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವಂತ ಕೆಲಸ ಮಾಡುತ್ತಿದೆ. ಅನಾಮಿಕ ಎಷ್ಟು ಸಾಚಾ ಅನ್ನೋದನ್ನ ಅವರ ಕುಟುಂಬದವರೇ ಹೇಳಿದ್ದು, ಇಂತವರನ್ನು ಗುಂಡಿಟ್ಟು ಹೊಡೆಯಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.