ಮೆಟ್ರೋ ದರ ಹೆಚ್ಚಳ: ಕೇಂದ್ರ ಸಚಿವ ವಿ. ಸೋಮಣ್ಣ ಆಕ್ರೋಶ
ದಾವಣಗೆರೆ: ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಮೆಟ್ರೋ ದರ ಏರಿಕೆ ನಿರ್ಧಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ. ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರ ಅನಾವಶ್ಯಕ ಗೊಂದಲ ಸೃಷ್ಟಿಸಿ ಜನರ ಮೇಲೆ ಹೊರೆ ಹೇರಿದೆ ಎಂದು ಕಿಡಿಕಾರಿದ್ದಾರೆ.
ಭಾನುವಾರ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಿವೃತ್ತ ಅಧಿಕಾರಿಗಳನ್ನು ಸೇರಿಸಿಕೊಂಡು ರಾಜ್ಯ ಸರ್ಕಾರವೇ ಈ ದರ ಏರಿಕೆಯ ಆಟ ಆಡುತ್ತಿದೆ. ಇದು ಸಂಪೂರ್ಣವಾಗಿ ಜನ ವಿರೋಧಿ ನಿರ್ಧಾರವಾಗಿದೆ” ಎಂದು ಟೀಕಿಸಿದರು.
ಇದನ್ನೂ ಓದಿ: ಆದಿಜಾಂಬವ ಶಾಖಾ ಮಠ ತೆರೆದರೆ ಕಾನೂನು ಹೋರಾಟ: ಸ್ವಾಮೀಜಿ ಎಚ್ಚರಿಕೆ
ಮೆಟ್ರೋ ಉಪಯುಕ್ತ ಯೋಜನೆಗೆ ಗದಾಪ್ರಹಾರ ಬೇಡ: ಮೆಟ್ರೋ ಯೋಜನೆ ಕುರಿತು ಮಾತನಾಡಿದ ಸೋಮಣ್ಣ, “ಒಮ್ಮೆ ಕಾಂಗ್ರೆಸ್ ನಾಯಕರೇ ಮೆಟ್ರೋವನ್ನು ‘ಬಿಳಿ ಆನೆ’ ಎಂದು ಟೀಕಿಸಿದ್ದರು. ಆದರೆ ಇಂದು ಇದೇ ಮೆಟ್ರೋದಲ್ಲಿ ನಿತ್ಯವೂ ಐದಾರು ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಇಂತಹ ಉಪಯುಕ್ತ ಯೋಜನೆಗೆ ಗದಾಪ್ರಹಾರ ಮಾಡುವ ಕೆಲಸ ಬೇಡ. ಜನರ ಮೇಲೆ ಅನ್ಯಾಯವಾಗಿ ಹೊರೆ ಹಾಕಬಾರದು” ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕೆ: ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದ ಅವರು, “ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಹಳಿ ತಪ್ಪಿದೆ. ಜನರ ಭಾವನೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಈ ಮಾತುಗಳನ್ನು ನೋವಿನಿಂದ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಈಗ ನಿರ್ವೀರ್ಯ ಮತ್ತು ನಿಸ್ಸಾಹಾಯಕ ಮುಖ್ಯಮಂತ್ರಿಯಾಗಿದ್ದಾರೆ. ಮುಂಚಿನ ಸಿದ್ದರಾಮಯ್ಯ ಈಗ ಕಾಣಿಸುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ದಾವಣಗೆರೆ: ಸುರಕ್ಷತಾ ಕಿಟ್‌ನಲ್ಲಿ ₹90 ಕೋಟಿ ಭ್ರಷ್ಟಾಚಾರ ಆರೋಪ
ಆಡಳಿತದ ಗುಣಮಟ್ಟ ಕುಸಿತದ ಆರೋಪ: ತಮ್ಮ 48 ವರ್ಷಗಳ ಸಾರ್ವಜನಿಕ ಜೀವನದ ಅನುಭವವನ್ನು ಹಂಚಿಕೊಂಡ ಸೋಮಣ್ಣ, “ಕೆಂಗಲ್ ಹನುಮಂತಪ್ಪ, ಎಸ್. ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂತಹ ಪುಣ್ಯಾತ್ಮರು ಉತ್ತಮ ಆಡಳಿತ ನೀಡಿದ್ದಾರೆ. ಇಂದಿನವರಲ್ಲಿ ಆ ಗುಣಗಳು ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುವ ಕಚ್ಚಾಟದಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಯಾವುದೇ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಇವರು ಅರಿಯಬೇಕು” ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತು ಸ್ಪಷ್ಟನೆ: ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮೂರು ದಿನಗಳಿಂದ ದೆಹಲಿಯಿಂದ ದೂರವಿದ್ದೆ. ಇಂದು ಮತ್ತೆ ದೆಹಲಿಗೆ ತೆರಳುತ್ತಿದ್ದೇನೆ. ನಮ್ಮ ಪಕ್ಷ ಹಾಗೂ ಹೈಕಮಾಂಡ್ ಸದೃಢವಾಗಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು–ವಿಜಯಪುರ ವಂದೇ ಭಾರತ್, ಹೈಸ್ಪೀಡ್ ಕಾರಿಡಾರ್‌ಗೆ ಎಂ.ಬಿ. ಪಾಟೀಲ್ ಮನವಿ
ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಹರಿಹರದ ರೈಲ್ವೇ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದ ಅವರು, ಅಂಡರ್‌ಪಾಸ್ ನಿರ್ಮಾಣದ ಬೇಡಿಕೆ ಇರುವುದಾಗಿ ಹೇಳಿದರು. “ನಮ್ಮ ಸರ್ಕಾರ ಇದುವರೆಗೆ 700 ಮೇಲ್ಸೇತುವೆಗಳನ್ನು ನಿರ್ಮಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ಮೇಲ್ಸೇತುವೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ” ಎಂದು ಮಾಹಿತಿ ನೀಡಿದರು.
ಜನರ ಪರ ನಿಲುವಿನ ಭರವಸೆ: ಮೆಟ್ರೋ ದರ ಏರಿಕೆ ಸೇರಿದಂತೆ ಜನವಿರೋಧಿ ನಿರ್ಧಾರಗಳ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಸೂಚಿಸಿದ ಸೋಮಣ್ಣ, ಸರ್ಕಾರ ಜನರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.





















