Home Advertisement
Home ನಮ್ಮ ಜಿಲ್ಲೆ ದಾವಣಗೆರೆ ವಚನಶ್ರೀ ಉಚ್ಚಾಟಿಸುವ ಉದ್ದೇಶವಿಲ್ಲ, ನಡೆ ತಿದ್ದಿಕೊಳ್ಳಲಿ: ಟ್ರಸ್ಟ್

ವಚನಶ್ರೀ ಉಚ್ಚಾಟಿಸುವ ಉದ್ದೇಶವಿಲ್ಲ, ನಡೆ ತಿದ್ದಿಕೊಳ್ಳಲಿ: ಟ್ರಸ್ಟ್

0
52

ದಾವಣಗೆರೆ: ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿಗಳ ಕೆಲವು ನಡೆಗಳನ್ನು ತಿದ್ದಿಕೊಳ್ಳುವಂತೆ ಸೂಚಿಸಲಾಗಿದೆಯೇ ಹೊರತು, ಅವರನ್ನು ಪೀಠದಿಂದ ಉಚ್ಚಾಟಿಸುವ ಯಾವುದೇ ಉದ್ದೇಶ ಟ್ರಸ್ಟ್‌ಗೆ ಇಲ್ಲ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಟ್ರಸ್ಟ್ ಸ್ಪಷ್ಟಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಾವಿ ಬೆಟ್ಟಪ್ಪ, ವಚನಾನಂದ ಶ್ರೀಗಳನ್ನು ಹರಪೀಠಕ್ಕೆ ಕರೆತರುವ ಸಂದರ್ಭದಲ್ಲೇ ಬೆಂಗಳೂರಿನ ಶ್ವಾಸ ಸಂಸ್ಥೆಯನ್ನು ತ್ಯಜಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಇದಕ್ಕೆ ಅವರು ಸಮ್ಮತಿಸಿದ ನಂತರವೇ 2018ರಲ್ಲಿ ಅವರಿಗೆ ಪಟ್ಟಾಭಿಷೇಕ ಮಾಡಲಾಗಿತ್ತು. ಆದರೆ ಪೀಠಾರೋಹಣದ ನಂತರ ಇದುವರೆಗೆ ಆರು ಬಾರಿ ಅವಕಾಶ ನೀಡಿದರೂ ಅವರು ಶ್ವಾಸ ಸಂಸ್ಥೆಯನ್ನು ತೊರೆದಿಲ್ಲ. ಈ ಕುರಿತು ನಿರ್ಧಾರ ಕೈಗೊಳ್ಳಲು ಅವರು ಮಾರ್ಚ್ 24ರವರೆಗೆ ಕಾಲಾವಕಾಶ ಕೇಳಿದ್ದರು. ಆ ಗಡುವು ಹತ್ತಿರ ಬರುತ್ತಿದ್ದಂತೆಯೇ ಸಮಾಜದ ಗೌರವಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ತಮ್ಮ ಬೆಂಬಲಿಗರಿಂದ ಗಲಾಟೆ ಮಾಡಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಮಠದ ಅವ್ಯವಹಾರದ ಆರೋಪ ಕುರಿತು ಮಾತನಾಡಿದ ಅವರು, ಟ್ರಸ್ಟ್‌ನಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಸರ್ಕಾರದ ಆರ್‌ಡಿಪಿಆರ್ ಯೋಜನೆಯಡಿ ಬಂದ 11.10 ಕೋಟಿ ರೂ., ಅನುದಾನದ ಜೊತೆಗೆ, ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು ವೈಯಕ್ತಿಕವಾಗಿ ಹಣ ನೀಡಿ ಮಠದಲ್ಲಿ ದಾಸೋಹ ಮಂದಿರ, ವಿದ್ಯಾರ್ಥಿನಿಲಯ ಹಾಗೂ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಮಠದ ನಿರ್ವಹಣೆಗೆ ತಿಂಗಳಿಗೆ ತಗಲುವ 3 ರಿಂದ 4 ಲಕ್ಷ ರೂ.ಗಳನ್ನು ಧರ್ಮದರ್ಶಿಗಳೇ ಭರಿಸುತ್ತಿದ್ದೇವೆ. ಹೀಗಿರುವಾಗ ಅವ್ಯವಹಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗಿನ ಆಡಳಿತಾಧಿಕಾರಿ ಡಾ. ರಾಜಕುಮಾರ್ ಅವರೇ ಸಭೆಯ ನಡಾವಳಿಗಳಿಗೆ ಸಹಿ ಹಾಕಿ, ಈಗ ಸುಳ್ಳು ಆರೋಪ ಹೊರಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಸಮಾಜಕ್ಕೆ ಮಾಡಿದ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಮಾತನಾಡಿ, ಸ್ವಾಮೀಜಿಗಳು ಬೆಂಗಳೂರಿನ ಶ್ವಾಸ ಸಂಸ್ಥೆಗೆ ಹೆಚ್ಚು ಸಮಯ ಮೀಸಲಿಡುವುದರಿಂದ ಪಂಚಮಸಾಲಿ ಸಮಾಜದ ಸಂಘಟನೆಗೆ ಹಿನ್ನಡೆಯಾಗುತ್ತಿದೆ. ಈ ಕಾರಣಕ್ಕಾಗಿ ಶ್ವಾಸ ಸಂಸ್ಥೆ ತ್ಯಜಿಸಲು ಒತ್ತಾಯಿಸಲಾಗುತ್ತಿದೆ. ಜತೆಗೆ ಅವರು ತಮ್ಮ ನಡವಳಿಕೆಯನ್ನೂ ತಿದ್ದಿಕೊಳ್ಳಬೇಕು. ಒಂದು ವೇಳೆ ಮಾರ್ಚ್ 24ರೊಳಗೆ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಸಮಾಜದ ಮುಖಂಡರು ಹಾಗೂ ಟ್ರಸ್ಟ್ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಟ್ರಸ್ಟಿಗಳಾದ ಪಿ.ಡಿ ಶಿರೂರು, ಟ್ರಸ್ಟ್‌ನ ಕಾರ್ಯದರ್ಶಿಗಳಾದ ಜ್ಯೋತಿ ಪ್ರಕಾಶ್, ಕಳಕನಗೌಡ್ರು, ಚಿತ್ರದುರ್ಗದ ನಾಗಣ್ಣ, ಹಾವೇರಿ ಮಹೇಶ್, ಧರ್ಮದರ್ಶಿಗಳಾದ ಚಂದ್ರಶೇಖರ್ ಪೂಜಾರ್, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪರಮೇಶ್ ಪಟ್ಟಣಶೆಟ್ಟಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ವಸಂತಮ್ಮ ಹುಲ್ಲತ್ತಿ, ಯುವ ಘಟಕದ ರಾಜ್ಯಾಧ್ಯಕ್ಷರಾದ ಕಿಚಡಿ ಕೊಟ್ರೇಶ್ ಹಾಗೂ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಶ್ಮಿ ಕುಂಕೋದ್ ಇತರರಿದ್ದರು.