ನಮ್ಮ ತಂದೆ ಶಾಮನೂರು ಕೊಡುಗೆ ಅಪಾರ: ಸಚಿವ ಮಲ್ಲಿಕಾರ್ಜುನ

0
29

ದಾವಣಗೆರೆ: ಹಿರಿಯ ರಾಜಕೀಯ ನಾಯಕ ಹಾಗೂ ಕೈಗಾರಿಕೋದ್ಯಮಿ ಡಾ. ಶಾಮನೂರು ಶಿವಶಂಕರಪ್ಪ ಅವರು ರಾಜಕೀಯ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ದಾವಣಗೆರೆಗೆ ನೀಡಿರುವ ಕೊಡುಗೆ ಅನನ್ಯವಾದದ್ದು ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಶಾಮನೂರು ಶಿವಶಂಕರಪ್ಪ ಅವರು ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು, ನಂತರ ಶಾಸಕರಾಗಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು. ರಾಜಕೀಯ ಕ್ಷೇತ್ರದ ಜೊತೆಗೆ ಕೈಗಾರಿಕೋದ್ಯಮಿಯಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಸಾವಿರಾರು ಕುಟುಂಬಗಳ ಜೀವನಾಧಾರವಾಗಿದ್ದಾರೆ ಎಂದು ಸ್ಮರಿಸಿದರು.

ಶಾಮನೂರು ಅವರು ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ದಾವಣಗೆರೆಯನ್ನು ಶೈಕ್ಷಣಿಕ ಕೇಂದ್ರವಾಗಿ ರೂಪಿಸಿದರು. ಇಂದು ಕೇವಲ ಕರ್ನಾಟಕ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳು ಹಾಗೂ ವಿದೇಶಗಳಿಂದಲೂ ವಿದ್ಯಾರ್ಥಿಗಳು ದಾವಣಗೆರೆಗೆ ಬಂದು ಶಿಕ್ಷಣ ಪಡೆದುಕೊಳ್ಳುತ್ತಿರುವುದು ಅವರ ದೂರದೃಷ್ಟಿಯ ಫಲವಾಗಿದೆ ಎಂದು ಹೇಳಿದರು.

ಇಂತಹ ಮಹಾನ್ ವ್ಯಕ್ತಿತ್ವ ನಮ್ಮನ್ನಗಲಿರುವುದು ತುಂಬಲಾರದ ನಷ್ಟವಾಗಿದೆ. ತಂದೆಯ ಅಗಲಿಕೆಯಿಂದ ಕುಟುಂಬಕ್ಕೆ ಮಾತ್ರವಲ್ಲದೆ, ದಾವಣಗೆರೆ ಜಿಲ್ಲೆಯ ಜನತೆಗೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ದೊಡ್ಡ ಶೂನ್ಯತೆ ಉಂಟಾಗಿದೆ ಎಂದು ಅವರು ಭಾವೋದ್ವೇಗದಿಂದ ಹೇಳಿದರು.

ಎಸ್ಸೆಸ್ ಕಳೆದುಕೊಂಡು ದಾವಣಗೆರೆ ಅನಾಥವಾಗಿದೆ – ಶಾಸಕ ಕೆ.ಎಸ್. ಬಸವಂತಪ್ಪ: ಹಿರಿಯ ಮುತ್ಸದ್ದಿ ರಾಜಕಾರಣಿ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಕಳೆದುಕೊಂಡು ದಾವಣಗೆರೆ ಅನಾಥವಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ವಿಷಾದಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆ ಎಂದೇ ಭಾವಿಸಿದ್ದೆವು. ಆದರೆ, ಅವರ ನಿಧನ ದಾವಣಗೆರೆ ಮಾತ್ರವಲ್ಲ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇದಾರ ಶ್ರೀಗಳಿಂದ ಅಂತಿಮ ದರ್ಶನ

ಕೇದಾರ ಶ್ರೀಗಳಿಂದ ಅಂತಿಮ ದರ್ಶನ
Previous articleಕನಿಷ್ಠ ಐದು ವರ್ಷಗಳ ಕಾಲ ಹೊಸ ಆಟೋರಿಕ್ಷಾ ಪರ್ಮಿಟ್ ನಿಷೇಧಿಸಿ