ರಾಜ್ಯದ ಜಿಡಿಪಿ 8.1: ಆರ್ಥಿಕ ಅಂಕಿ-ಅಂಶಗಳೊಂದಿಗೆ ಸಿಎಂ ಉತ್ತರ
ದಾವಣಗೆರೆ: ಕರ್ನಾಟಕದ ಆರ್ಥಿಕ ಸ್ಥಿತಿ ದಿವಾಳಿಯಾಗಿಲ್ಲ, ಬದಲಾಗಿ ಸುಸ್ಥಿತಿಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಬಿಜೆಪಿಯವರು ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ರಾಜ್ಯದ ಆರ್ಥಿಕ ಸ್ಥಿತಿ ಬಲವಾಗಿದ್ದು ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, “ನಾವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಈವರೆಗೂ ಮಹಿಳೆಯರ ಖಾತೆಗೆ ₹1.35 ಲಕ್ಷ ಕೋಟಿ ರೂಪಾಯಿ ಜಮಾ ಮಾಡಿದ್ದೇವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೇ ₹535 ಕೋಟಿ ಮಹಿಳೆಯರ ಖಾತೆಗೆ ಹೋಗಿದೆ. ಇಷ್ಟೊಂದು ಹಣವನ್ನು ನೇರವಾಗಿ ಜನರಿಗೆ ನೀಡುತ್ತಿದ್ದೇವೆ ಎಂದಾಗ ಖಜಾನೆ ಖಾಲಿಯಾಗುತ್ತದೆ ಎಂಬ ಮಾತು ಅಸಂಬದ್ಧ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ಅವರು ಮಾಡಿದ್ದ “ಸಿದ್ದರಾಮಯ್ಯ ಅಲ್ಲ, ಸಾಲದರಾಮಯ್ಯ” ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯದ ಆರ್ಥಿಕ ಸೂಚ್ಯಂಕಗಳು ಬಲವಾಗಿರುವುದನ್ನು ಉಲ್ಲೇಖಿಸಿದರು. “ದೇಶದ ಜಿಡಿಪಿ ದರ 7.15 ಇದ್ದರೆ, ಕರ್ನಾಟಕದ ಜಿಡಿಪಿ 8.1 ಇದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಬಂಡವಾಳ ಹೂಡಿಕೆಯಲ್ಲಿ ಕೂಡ ರಾಜ್ಯ ಮುಂಚೂಣಿಯಲ್ಲಿದೆ” ಎಂದು ವಿವರಿಸಿದರು.
ಇನ್ನೂ ದೇಶದ ಆರ್ಥಿಕ ಸ್ಥಿತಿಯನ್ನು ಹೋಲಿಕೆ ಮಾಡಿ ಮಾತನಾಡಿದ ಸಿಎಂ, “ರೂಪಾಯಿ ಮೌಲ್ಯ ಡಾಲರ್ ಮುಂದೆ ಕುಸಿಯುತ್ತಿರುವುದು ದೇಶದ ಆರ್ಥಿಕ ಸ್ಥಿತಿಯನ್ನೇ ತೋರಿಸುತ್ತದೆ. ಆದ್ದರಿಂದ ಮೊದಲು ರಾಷ್ಟ್ರದ ಸ್ಥಿತಿಯನ್ನು ನೋಡಬೇಕು” ಎಂದು ಹೇಳಿದರು.
ಉಪಚುನಾವಣೆ ಪ್ರಚಾರದ ಜೋಶನಲ್ಲಿ: ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ರಣ ಬಿಸಿಲಿನಲ್ಲೂ ಪ್ರಚಾರ ನಡೆಸಿದರು. ನಾಗನೂರು, ಶಿರಮಗೊಂಡನಹಳ್ಳಿ, ಹದಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರೋಡ್‌ಶೋ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ಮತದಾರರನ್ನು ಮನವರಿಕೆ ಮಾಡಿದರು.






















