Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ದಕ್ಷಿಣ ಕಣಕ್ಕೆ ಶಾಮನೂರು ಮೊಮ್ಮಗ: ₹4.25 ಕೋಟಿ ಆಸ್ತಿ ಘೋಷಣೆ

ದಾವಣಗೆರೆ ದಕ್ಷಿಣ ಕಣಕ್ಕೆ ಶಾಮನೂರು ಮೊಮ್ಮಗ: ₹4.25 ಕೋಟಿ ಆಸ್ತಿ ಘೋಷಣೆ

0
133

​ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಮರ್ಥ್ ಶಾಮನೂರು ಅವರು ಶುಕ್ರವಾರ ತಮ್ಮ ನಾಮಪತ್ರದೊಂದಿಗೆ ಆಸ್ತಿ ವಿವರಗಳ ಅಫಿಡವಿಟ್ ಸಲ್ಲಿಸಿದ್ದಾರೆ. 27 ವರ್ಷದ ಯುವ ಉದ್ಯಮಿ ಸಮರ್ಥ್ ಅವರು ಒಟ್ಟು ₹4.25 ಕೋಟಿಗೂ ಅಧಿಕ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

​ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರರಾಗಿರುವ ಸಮರ್ಥ್, ರಾಜಕೀಯಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅಫಿಡವಿಟ್‌ನಲ್ಲಿ ನೀಡಿರುವ ಮಾಹಿತಿಯಂತೆ, ಇವರ ಬಳಿ ₹2.17 ಕೋಟಿ ಮೌಲ್ಯದ ಚರ ಆಸ್ತಿ ಹಾಗೂ ₹2.08 ಕೋಟಿ ಮೌಲ್ಯದ ಕೃಷಿ ಭೂಮಿ ಸೇರಿದಂತೆ ಸ್ಥಿರ ಆಸ್ತಿಯಿದೆ.

​ಆಸ್ತಿ ವಿವರಗಳು: ಸಮರ್ಥ್ ಅವರ ಹೆಸರಿನಲ್ಲಿ ₹8.35 ಲಕ್ಷ ನಗದು ಹಣವಿದ್ದು, ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಹೂಡಿಕೆ ಹಾಗೂ ₹14.45 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ. ದಾವಣಗೆರೆ ತಾಲೂಕಿನ ಆನೇಕೊಂಡ ಮತ್ತು ಬೆತೂರು ಗ್ರಾಮಗಳಲ್ಲಿ ಒಟ್ಟು 6 ಎಕರೆ 14 ಗುಂಟೆ ಕೃಷಿ ಭೂಮಿಯನ್ನು ಅವರು ಹೊಂದಿದ್ದಾರೆ.

ಸಾಲದ ವಿವರ: ಆಸ್ತಿಯ ಜೊತೆಗೆ ಸಮರ್ಥ್ ಅವರ ಹೆಸರಿನಲ್ಲಿ ಒಟ್ಟು ₹3.52 ಕೋಟಿ ಮೊತ್ತದ ಸಾಲ ಹಾಗೂ ಹೊಣೆಗಾರಿಕೆಗಳಿವೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. 2024-25ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಅವರು ₹96.05 ಲಕ್ಷ ವಾರ್ಷಿಕ ಆದಾಯವನ್ನು ತೋರಿಸಿದ್ದಾರೆ.

​ಕ್ರಿಮಿನಲ್ ಪ್ರಕರಣಗಳಿಲ್ಲ: ಅಭ್ಯರ್ಥಿಯ ವಿರುದ್ಧ ಯಾವುದೇ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಹಾಗೂ ಯಾವುದೇ ನ್ಯಾಯಾಲಯದಿಂದ ಶಿಕ್ಷೆಯಾಗಿಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಇವರು, ದಾವಣಗೆರೆ ಉತ್ತರ ಕ್ಷೇತ್ರದ ಮತದಾರರಾಗಿದ್ದಾರೆ.