ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಗಣ್ಯರು, ಅಭಿಮಾನಿಗಳ ಮಹಾಪೂರ

0
4

ದಾವಣಗೆರೆಯಲ್ಲಿ ಶೋಕಸಾಗರ: ಮಧ್ಯಾಹ್ನ ಸಾರ್ವಜನಿಕ ದರ್ಶನ, ಸಂಜೆ ಪಾರ್ಥೀವ ಶರೀರ ಮೆರವಣಿಗೆಜಿಲ್ಲೆಯಾದ್ಯಂತ ಶಾಲಾ–ಕಾಲೇಜುಗಳಿಗೆ ರಜೆ ಘೋಷಣೆ – ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ

ದಾವಣಗೆರೆ: ರಾಜ್ಯದ ಹಿರಿಯ ರಾಜಕಾರಣಿ, ದೀರ್ಘಕಾಲ ಶಾಸಕನಾಗಿ ಸೇವೆ ಸಲ್ಲಿಸಿದ್ದ ಡಾ. ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ದಾವಣಗೆರೆ ಜಿಲ್ಲೆ ಶೋಕದಲ್ಲಿ ಮುಳುಗಿದೆ. ಅವರ ಪಾರ್ಥೀವ ಶರೀರವನ್ನು ಪುತ್ರ ಹಾಗೂ ರಾಜ್ಯ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಕುಟುಂಬಸ್ಥರು, ರಾಜಕೀಯ ಗಣ್ಯರು, ವಿವಿಧ ಮಠಾಧೀಶರು ಹಾಗೂ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಆಗಮಿಸಿ ನಮನ ಸಲ್ಲಿಸಿದರು.

ಸಚಿವರ ಮನೆಯಲ್ಲಿ ಆರಂಭದಲ್ಲಿ ಕುಟುಂಬಸ್ಥರು ಹಾಗೂ ಗಣ್ಯರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾದರೂ, ಬಳಿಕ ಸಾರ್ವಜನಿಕರು, ಶಾಮನೂರು ಅವರ ಅಪಾರ ಅಭಿಮಾನಿಗಳು, ಬಾಪೂಜಿ ವಿದ್ಯಾಸಂಸ್ಥೆಯ ನೌಕರರು ಮತ್ತು ಸಿಬ್ಬಂದಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದರು. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: ಶಾಮನೂರಿನಿಂದ ದಾವಣಗೆರೆ ಧಣಿಯಾದ ಶಿವಶಂಕರಪ್ಪ

ಗಣ್ಯರು ಮತ್ತು ಮಠಾಧೀಶರ ಆಗಮನ: ಉಜ್ಜಯಿನಿ ಶ್ರೀಗಳು, ಸಿದ್ಧಗಂಗಾ ಶ್ರೀಗಳು, ಸಾಣೇಹಳ್ಳಿ ಶ್ರೀಗಳು, ಮುರುಘಾ ಶರಣರು, ಕಣ್ವಕುಪ್ಪಿ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಅಂತಿಮ ದರ್ಶನ ಪಡೆದರು. ರಾಜಕೀಯ ಗಣ್ಯರಲ್ಲಿ ಬಿ.ವೈ. ವಿಜಯೇಂದ್ರ, ಬಿ.ವೈ. ರಾಘವೇಂದ್ರ, ಕೆ.ಎಸ್. ನವೀನ್, ಶಿವಮೊಗ್ಗ ಶಾಸಕ ಚನ್ನಬಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಲ್ಲಾದ್ಯಂತ ಶೋಕಾಚರಣೆ: ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಕೆಲವು ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ದಾವಣಗೆರೆ ನಗರದಲ್ಲಿ ಹಲವಾರು ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಶೋಕ ಸೂಚಿಸಿದ್ದಾರೆ.

ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ ವಿವರ: ನಗರದ ಹೈಸ್ಕೂಲ್ ಮೈದಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮಧ್ಯಾಹ್ನ 3.30 ಗಂಟೆಗೆ ಪಾರ್ಥೀವ ಶರೀರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಗುತ್ತದೆ. ನಂತರ ನಗರದ ಕಲ್ಲೇಶ್ವರ ಮಿಲ್ ಬಳಿ, ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿವಿಧಾನಗಳಂತೆ, ಪತ್ನಿ ಪಾರ್ವತಮ್ಮ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಶಾಮನೂರು ಶಿವಶಂಕರಪ್ಪ ಅವರು ರಾಜಕೀಯ, ಶಿಕ್ಷಣ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಸ್ಮರಿಸಿ ದಾವಣಗೆರೆ ನಗರವೇ ಮೌನವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.

Previous articleಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಆರೋಪ: ರಾಜ್ಯಾದ್ಯಂತ ಲ್ಯಾಬ್ ಪರೀಕ್ಷೆಗೆ ಸೂಚನೆ