ದಾವಣಗೆರೆ: ದಾವಣಗೆರೆಯಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿರುವಸಿರುವ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನಾದ ತಮಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗಲಿದ್ದು, ನಾಳೆ (ಶನಿವಾರ) ಘೋಷಣೆಯಾಗುವ ಸಂಭವವಿದೆ ಎಂದು ಸಮರ್ಥ್ ಶಾಮನೂರು ವಿಶ್ವಾಸ ವ್ಯಕ್ತಪಡಿಸಿದರು.
ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಾತ ಶಾಮನೂರು ಶಿವಶಂಕರಪ್ಪ, ನಗರದೇವತೆ ಶ್ರೀ ದುಗ್ಗಮ್ಮ ದೇವಿ ಹಾಗೂ ಇಲ್ಲಿರುವ ಎಲ್ಲಾ ಹಿರಿಯರ, ಪಕ್ಷದ ಕಾರ್ಯಕರ್ತರ ಆಶೀರ್ವಾದ ಪಡೆದುಕೊಂಡು ಇಂದು ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದರು.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಪ್ರಶ್ನೆಯೇ ಉದ್ಭವಿಸದು, ದಾವಣಗೆರೆ ಜಿಲ್ಲೆಯ ಜನರಷ್ಟೇ ಅಲ್ಲದೇ ಇಡೀ ರಾಜ್ಯದಲ್ಲಿಯೂ ಶಾಮನೂರು ಶಿವಶಂಕರಪ್ಪ ಅವರನ್ನು ಅಪ್ಪಾಜಿ ಎಂದಲೇ ಸಂಬೋಧಿಸುತ್ತಿದ್ದರು. ಕಾಂಗ್ರೆಸ್ ಕಟ್ಟಾಳು ಆಗಿರುವ ಅವರ ಮೊಮ್ಮಗನಾದ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.
ಮುಂದೆ ದಾವಣಗೆರೆಯನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಮತ್ತು ಜನರ ಆಶೋತ್ತರಗಳಿಗೆ ಸ್ಪಂದಿಸುವ ಗುರಿಯಿದೆ ಎಂದು ಇದೇ ವೇಳೆ ತಿಳಿಸಿದರು.





















