ದಾವಣಗೆರೆಯ ಮಟ್ಟಿಕಲ್‌ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸ್ಥಳದಲ್ಲಿ ಅಳವಡಿಸಿದ ಆಕ್ಷೇಪಾರ್ಹ ಚಿತ್ರವೊಂದನ್ನು ತೆರವುಗೊಳಿಸುವ ವಿಚಾರದಲ್ಲಿ ಸಂಘಪರಿವಾರದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಗುರುವಾರ ರಾತ್ರಿ ವಾಗ್ವಾದ ನಡೆಯಿತು. ಕೊನೆಗೆ ಅಕ್ಷೇಪಾರ್ಹ ಚಿತ್ರವನ್ನು ಪೊಲೀಸರು ತೆರವುಗೊಳಿಸಿದರು.
ಮಟ್ಟಿಕಲ್‌ನ ವೀರ ಸಾವರ್ಕರ್ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಈ ವೇಳೆ ಸಮೀಪದ ರಸ್ತೆಯಲ್ಲಿ ಇತಿಹಾಸದ ಮಹನೀಯರ ಬೃಹತ್ ಗಾತ್ರದ ಚಿತ್ರಗಳನ್ನು ಅಳವಡಿಸಲಾಗಿತ್ತು.
ಅದರಲ್ಲಿ ಸಾವರ್ಕರ್ ಸೇರಿದಂತೆ ಅನೇಕರ ಚಿತ್ರಗಳಿದ್ದವು. ಶಿವಾಜಿ ಮಹಾರಾಜ್ ಹಾಗೂ ಅಫ್ಜಲ್ ಖಾನ್ ನಡುವಿನ ಯುದ್ಧದ ಸನ್ನಿವೇಶದ ಚಿತ್ರ ಇರುವ ಬ್ಯಾನರ್ ಸ್ಥಳದಲ್ಲಿ ವಿವಾದಕ್ಕೆ ಕಾರಣವಾಗಿತ್ತು.
ಈ ಚಿತ್ರವನ್ನು ಕಂಡ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದು ಎರಡು ಕೋಮುಗಳ ನಡುವಿನ ಭಾವನೆಗಳನ್ನು ಕೆರಳಿಸುತ್ತಿದೆ ಎಂದು ತಕರಾರು ತೆಗೆದಿದ್ದಾರೆ. ರಾತ್ರಿ ಪೊಲೀಸರು ಆಗಮಿಸಿ, ಆಕ್ಷೇಪಾರ್ಹ ಚಿತ್ರವನ್ನು ತೆರವುಗೊಳಿಸುವಂತೆ ಗಣೇಶ ಉತ್ಸವ ಸಮಿತಿಗೆ ಸೂಚಿಸಿದ್ದಾರೆ.
ಈ ಸೂಚನೆಯನ್ನು ನಿರಾಕರಿಸಿದ ಸಮಿತಿ ಸದಸ್ಯರು, ಇದು ಐತಿಹಾಸಿಕ ಘಟನೆಯಾಗಿದ್ದು ತೆರವುಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ಯುವಕರ ಗುಂಪು ಘೋಷಣೆ ಕೂಗಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದೆ.
ಹಿಂದೂಪರ ಸಂಘಟನೆ ಮುಖಂಡರು ಮತ್ತು ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಪೊಲೀಸರು ಎಲ್ಲರ ಮನವೋಲಿಸಿ ಅಕ್ಷೇಪಾರ್ಹ ಚಿತ್ರವನ್ನು ತೆರವು ಮಾಡಿದ್ದಾರೆ.