ದಾವಣಗೆರೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಕಾಂಗ್ರೆಸ್ಸಿನ 50-60 ಶಾಸಕರು ಬಿಜೆಪಿಗೆ ಬರುತ್ತಾರೆ. ಆ ಭ್ರಷ್ಟನ ಜೊತೆ ಸರ್ಕಾರ ಮಾಡ್ತೀವಿ ನನಗೆ ಇನ್ನೊಂದು ಅವಧಿ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರೆಸಿ ಎಂದು ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವರಿಷ್ಠರ ಮುಂದೆ ಬೇಡಿಕೆಯಿಟ್ಟಿದ್ದು, ಈತ ಡಿಕೆಶಿ ಸೂತ್ರಧಾರಿ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮುಖ್ಯಮಂತ್ರಿ ಮಾಡಲು ಈತ ಸೂತ್ರಧಾರಿ. ಪಕ್ಷವನ್ನು ಉದ್ಧಾರ ಮಾಡುವುದಾಗಿ ಹೇಳಿ ಮತ್ತೊಮ್ಮೆ ಪಕ್ಷದ ರಾಜ್ಯಾಧ್ಯಕ್ಷನಾಗಲು ಹೊರಟಿದ್ದಾನೆ. ಇವನ ತಂದೆ ಯಡಿಯೂರಪ್ಪ ಮೊನ್ನೆ ದೆಹಲಿಗೆ ಹೋಗಿ ನನ್ನ ಮಗನನನ್ನ ಮತ್ತೊಂದು ಅವಧಿಗೆ ಅಧ್ಯಕ್ಷನಾಗಿ ಮುಂದುವರಿಸಿ, ನನಗೆ ಬಿಪಿ, ಶುಗರ್ ಹೆಚ್ಚಾಗಿದೆ ಎಂದು ನಾಟಕ ಮಾಡಿ ಬಂದಿದ್ದಾನೆ. ಆದರೆ ಪಾಪ ಯಾರೂ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು.
ಕುಮಾರ ಬಂಗಾರಪ್ಪ ನಿವಾಸದಲ್ಲಿ ರೆಬೆಲ್ಸ್ ಬಿಜೆಪಿ ನಾಯಕರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಅಲ್ಲಿ ಸೇರಿದವರು ಎಲ್ಲಾ ಪಕ್ಷ ಕಟ್ಟಿದವರು, ಅವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ ಎಂದು ಹಾರಿಕೆ ಉತ್ತರ ನೀಡಿದರು.
ರಮೇಶ ಜಾರಕಿಹೊಳಿ 17 ಶಾಸಕರ ತರದೇ ಇದ್ದಿದ್ರೆ ಯಡಿಯೂರಪ್ಪ ಸಿಎಂ ಆಗ್ತಿರಲಿಲ್ಲ. ಆದರೆ, ರಮೇಶ ಜಾರಕಿಹೊಳಿ ಅವರನ್ನ ಯಾವ ರೀತಿ ಅವಮಾನ ಮಾಡಿದ್ರು ಎಂಬುದು ಇಡೀ ಜಗತ್ತು ನೋಡಿದೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ವಿಜಯೇಂದ್ರ ಬಹುದೊಡ್ಡ ಪಾತ್ರ ಇದ್ದಿದ್ದು ಸುದ್ದಿ ಇದೆ. ಇಂತಹ ಕೆಲಸ ಮಾಡುವವ ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದು ದುರಂತ, ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.

























