ದಾವಣಗೆರೆ: ನಮ್ಮ ಸಾಹುಕಾರ, ನಮ್ಮ ಸಿಎಂ ಎಂಬುದಾಗಿ ಅಭಿಮಾನಿಗಳು ನಾವು ಹೋದಲ್ಲೆಲ್ಲಾ ಘೋಷಣೆ ಕೂಗುತ್ತಾರೆ. ನಮ್ಮ ಮೇಲಿನ ಅಭಿಮಾನಕ್ಕಾಗಿ ಹೀಗೆಲ್ಲಾ ಮಾಡುತ್ತಾರೆ. ಅದರಲ್ಲಿ ಹೊಸದೇನೂ ಇಲ್ಲ. ನಮ್ಮದು ಈ ಅವಧಿಗೆ ಅಲ್ಲ. ಮುಂದಿನ 2028ರ ಅವಧಿಗೆ ಬೇಡಿಕೆ ಇದೆ ಎಂದು ತಾವು ಸಿಎಂ ಆಕಾಂಕ್ಷಿ ಆಗಿರುವುದಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಜಿಲ್ಲೆಯ ಚನ್ನಗಿರಿ ತಾಲೂಕು ಗೋಪೇನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಯಾರೂ ಸಹ ಯಾರಿಗೂ ಗೊಂದಲ ಮಾಡಬೇಡಿ. ಈಗ ಯಾರು ಆಗುವರೋ ಆಗಲಿ, ನಮ್ಮದು ಬೆಂಬಲ ಇದ್ದೇ ಇರುತ್ತದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ತುರ್ತು ಭೂಸ್ಪರ್ಶ
ಸಿಎಂ ಕುರ್ಚಿ ವಿಚಾರದಲ್ಲಿ ಆಗಿರುವ ಗೊಂದಲವನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ನಮ್ಮ ಕೈಯಲ್ಲಿ ಏನೂ ಇಲ್ಲ ಎಂದ ಅವರು, ಸಿಎಂ ಕುರ್ಚಿ ಗೊಂದಲ ಬಗೆಹರಿಯಬೇಕೆಂಬುದು ಎಲ್ಲಾ 140 ಶಾಸಕರ ಅಭಿಪ್ರಾಯವೂ ಆಗಿದೆ. ದೆಹಲಿಗೆ ಹೋಗುವುದು, ಬರುವುದು ಇದ್ದೇ ಇರುತ್ತದೆ. ಪ್ರತಿ ಸಲವೂ ಹೋಗುತ್ತಿರುತ್ತಾರೆ. ಈಗ ಅಸ್ಸಾಂ ಚುನಾವಣೆ ಹಿನ್ನೆಲೆಯಲ್ಲಿ ಹೋಗಿರಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸದ ಕುರಿತಂತೆ ಪ್ರತಿಕ್ರಿಯಿಸಿದರು.
ಅಸ್ಸಾಂ ವಿಧಾನಸಭೆ ಚುನಾವಣೆ ಇದೆ. ನಮ್ಮಲ್ಲೂ ಗ್ರೇಟರ್ ಬೆಂಗಳೂರು ಪಾಲಿಕೆಗೆ ಚುನಾವಣೆ ಇದೆ. ಜ. 21ರಂದು ನಮ್ಮ ಇಲಾಖೆಯ ಕೆಲಸ, ಕಾರ್ಯಗಳ ಹಿನ್ನೆಲೆಯಲ್ಲಿ ನಾವು ದೆಹಲಿಗೆ ಹೋಗುತ್ತಿದ್ದೇವೆ. ದೆಹಲಿಯ ಕರ್ನಾಟಕ ಭವನವು ನಮ್ಮ ಅಧೀನದಲ್ಲೇ ಇರುವುದರಿಂದ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕಾಗಿ ನಾವು ದೆಹಲಿಗೆ ಹೋಗುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.























