ದಾವಣಗೆರೆ: ದಾವಣಗೆರೆ ಜಿಲ್ಲಾಧಿಕಾರಿಗಳ ಅಧಿಕೃತ ಇ-ಮೇಲ್ ಖಾತೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶವೊಂದು ಬಂದಿರುವುದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. “ನಿಮ್ಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಐದು ಬಾಂಬ್‌ಗಳನ್ನು ಶೀಘ್ರದಲ್ಲೇ ಸ್ಫೋಟಿಸಲಾಗುವುದು” ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಿರುವುದರಿಂದ ಕೂಡಲೇ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೆದರಿಕೆ ಸಂದೇಶದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಭವನದ ಒಟ್ಟು 40 ಕೊಠಡಿಗಳನ್ನು ಬಾಂಬ್ ನಿಷ್ಕ್ರೀಯ ದಳದಿಂದ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: 1600 PSI ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ: ಡಾ.ಜಿ.ಪರಮೇಶ್ವರ್
ಅರಣಾ ಅಶ್ವಿನ್ ಶೇಖರ್ ಎಂಬ ಹೆಸರಿನ ಔಟ್‌ಲುಕ್ ಇ-ಮೇಲ್ ಖಾತೆಯಿಂದ ಈ ಬೆದರಿಕೆ ಸಂದೇಶ ಬಂದಿರುವುದು ಪತ್ತೆಯಾಗಿದೆ. ಆ ಇ-ಮೇಲ್‌ನಲ್ಲಿ “ಸಜ್ಜದ್ ಹೈದರ್ ಪಿಎಎಫ್ ಜಿಂದಾಬಾದ್” ಎಂಬ ಉಲ್ಲೇಖವಿದ್ದು, ಇದರಿಂದ ಭದ್ರತಾ ಸಂಸ್ಥೆಗಳು ಹೆಚ್ಚಿನ ಎಚ್ಚರಿಕೆ ವಹಿಸಿವೆ. ಜೊತೆಗೆ ಸಂದೇಶದಲ್ಲಿ “ಪಾಕಿಸ್ತಾನ – ತಮಿಳುನಾಡು ಡಿಎಂಕೆ – 2026 ಚುನಾವಣೆಗಳ ಗಮನವನ್ನು ಬೇರೆಡೆ ಸೆಳೆಯಲು ಬಯಸುತ್ತಿದೆ” ಎಂಬ ರಾಜಕೀಯ ಮತ್ತು ರಾಷ್ಟ್ರ ಭದ್ರತೆ ಸಂಬಂಧಿತ ಉಲ್ಲೇಖಗಳೂ ಇದ್ದು, ಆತಂಕ ಮತ್ತಷ್ಟು ಹೆಚ್ಚಾಗಿದೆ.
“ತಮಿಳುನಾಡಿನಲ್ಲಿ ಪಾಕಿಸ್ತಾನದ ಐಎಸ್‌ಐ ಸೆಲ್, ಮಾಜಿ ಎಲ್‌ಟಿಟಿಇ ಕಾರ್ಯಕರ್ತರೊಂದಿಗೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದೆ” ಎಂಬ ಗಂಭೀರ ಆರೋಪಗಳನ್ನು ಕೂಡ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಸೈಬರ್ ಕ್ರೈಂ ವಿಭಾಗದ ಸಹಾಯದಿಂದ ಇ-ಮೇಲ್ ಮೂಲ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ.
ಇದನ್ನೂ ಓದಿ: National Herald Case: ಸೋನಿಯಾಗಾಂಧಿ, ರಾಹುಲ್ಗೆ ತಾತ್ಕಾಲಿಕ ರಿಲೀಫ್
ಜಿಲ್ಲಾಧಿಕಾರಿಗಳು ಇ-ಮೇಲ್ ಸಂದೇಶವನ್ನು ಗಮನಿಸಿದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಪೊಲೀಸ್ ಹಾಗೂ ಬಾಂಬ್ ನಿಷ್ಕ್ರೀಯ ದಳವನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ. ಪ್ರಸ್ತುತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಗಾವಹಿಸಲಾಗಿದೆ.
ಈ ಘಟನೆ ಹುಸಿಬಾಂಬ್ ಬೆದರಿಕೆಯೆಂದು ಪ್ರಾಥಮಿಕವಾಗಿ ಶಂಕಿಸಲಾಗಿದ್ದರೂ, ಯಾವುದೇ ಅಸಡ್ಡೆ ತೋರದೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಲ್ಲಿ ಆತಂಕ ಬೇಡ, ಆದರೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.























