ದಾವಣಗೆರೆ: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ದಾವಣಗೆರೆಗೆ ಭೇಟಿ ನೀಡಿ, ಇತ್ತೀಚೆಗೆ ನಿಧನರಾದ ಹಿರಿಯ ಶಾಸಕ ಹಾಗೂ ಪ್ರಭಾವಿ ರಾಜಕಾರಣಿ ದಿ. ಶಾಮನೂರು ಶಿವಶಂಕರಪ್ಪ ಅವರ ಸಮಾಧಿ ಸ್ಥಳಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಸಮಾಧಿ ಬಳಿ ಕೆಲ ಕ್ಷಣ ಮೌನ ಪ್ರಾರ್ಥನೆ ಸಲ್ಲಿಸಿದ ಕುಮಾರಸ್ವಾಮಿ ಅವರು, ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಜೀವನ, ಸಾರ್ವಜನಿಕ ಸೇವೆ ಹಾಗೂ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ರಾಜ್ಯ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಅವರು ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಬಸ್ ದುರಂತ: ಪಿಎಂ, ಸಿಎಂ ಸಂತಾಪ
ಕುಟುಂಬ ಸದಸ್ಯರಿಗೆ ಸಾಂತ್ವನ: ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ, ಕುಮಾರಸ್ವಾಮಿ ಅವರು ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ತೆರಳಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ದುಃಖದ ಈ ಸಂದರ್ಭದಲ್ಲಿ ಕುಟುಂಬಕ್ಕೆ ಧೈರ್ಯ ತುಂಬುವ ಮಾತುಗಳನ್ನು ಹೇಳಿ, ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, “ಶಾಮನೂರು ಶಿವಶಂಕರಪ್ಪ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಜನಸೇವೆ ಮತ್ತು ದಾವಣಗೆರೆ ಭಾಗದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅನುಭವ, ಮಾರ್ಗದರ್ಶನ ಹಾಗೂ ಸಾರ್ವಜನಿಕ ಸೇವೆ ಎಂದಿಗೂ ಸ್ಮರಣೀಯ” ಎಂದು ಹೇಳಿದರು.
ರಾಜಕೀಯ ವಲಯದ ಗಣ್ಯರ ಉಪಸ್ಥಿತಿ: ಕುಮಾರಸ್ವಾಮಿ ಅವರ ದಾವಣಗೆರೆ ಭೇಟಿಯ ಸಂದರ್ಭದಲ್ಲಿ ಸ್ಥಳೀಯ ನಾಯಕರು, ಪಕ್ಷದ ಮುಖಂಡರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದು, ಶಾಮನೂರು ಶಿವಶಂಕರಪ್ಪ ಅವರ ಸ್ಮರಣೆಯನ್ನು ಗೌರವದಿಂದ ನೆನಪಿಸಿದರು.









