Home Advertisement
Home ನಮ್ಮ ಜಿಲ್ಲೆ ದಾವಣಗೆರೆ “BJPಗೆ ಮತ ಹಾಕಿದರೆ ಕಸದ ಬುಟ್ಟಿಗೆ ಹಾಕಿದಂತೆ” – ಈಶ್ವರ ಖಂಡ್ರೆ

“BJPಗೆ ಮತ ಹಾಕಿದರೆ ಕಸದ ಬುಟ್ಟಿಗೆ ಹಾಕಿದಂತೆ” – ಈಶ್ವರ ಖಂಡ್ರೆ

0
79

ದಾವಣಗೆರೆ: “ಬಿಜೆಪಿಗೆ ಮತ ಹಾಕಿದರೆ ಅದು ಕಸದ ಬುಟ್ಟಿಗೆ ಹಾಕಿದಂತೆಯೇ” ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ಮತ ನೀಡುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಕ್ಷೇತ್ರದಲ್ಲಿ ಸಕ್ರಿಯ ಪ್ರಚಾರ ನಡೆಸಿದ್ದು, 80ಕ್ಕೂ ಹೆಚ್ಚು ಬೂತ್‌ಗಳಿಗೆ ಭೇಟಿ ನೀಡಿದ್ದಾಗಿ ತಿಳಿಸಿದರು. “ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಸ್ಪಷ್ಟವಾಗಿ ಕಾಣುತ್ತಿದೆ. ಯುವಕರು ಮತ್ತು ಮಹಿಳೆಯರು ಸಮರ್ಥ್ ಪರವಾಗಿ ನಿಂತಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆಯನ್ನು ಉಲ್ಲೇಖಿಸಿದ ಖಂಡ್ರೆ, “ದಾವಣಗೆರೆಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಜನರು ಮರೆಯುವುದಿಲ್ಲ” ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್‌ಗೆ ಬೆಂಬಲ ತರುವುದಾಗಿ ಹೇಳಿದ ಅವರು, “ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಿದ್ದೇವೆ, ಬಡತನ ರೇಖೆಗಿಂತ ಮೇಲಕ್ಕೆ ತಂದಿದ್ದೇವೆ” ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಖಂಡ್ರೆ, “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರು, ರೈತರು, ಕಾರ್ಮಿಕರು ಹಾಗೂ ಮಹಿಳೆಯರಿಗೆ ವಿರುದ್ಧವಾಗಿದೆ. LPG ಬೆಲೆ ಏರಿಕೆಯಿಂದ ಜನ ಸಂಕಷ್ಟದಲ್ಲಿದ್ದಾರೆ. ರೂಪಾಯಿ ಮೌಲ್ಯ ಕುಸಿತವಾಗಿದೆ” ಎಂದು ಆರೋಪಿಸಿದರು.

“ಪ್ರತಿವರ್ಷ ₹14 ಲಕ್ಷ ಕೋಟಿ ಬಡ್ಡಿ ಪಾವತಿಯಾಗುತ್ತಿದೆ. ಇದು ರಾಜ್ಯದ ಮೂರು ವರ್ಷಗಳ ಬಜೆಟ್‌ಗೆ ಸಮಾನ. ಕೇಂದ್ರವು ರಾಜ್ಯಕ್ಕೆ ಸಮರ್ಪಕ ಅನುದಾನ ನೀಡುತ್ತಿಲ್ಲ” ಎಂದು ಹೇಳಿದರು.

ಅಬ್ದುಲ್ ಜಬ್ಬಾರ್ ಪ್ರಚಾರಕ್ಕೆ ಕರೆಯಲಾಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಪ್ರಚಾರ ಸ್ವಯಂ ಪ್ರೇರಣೆಯಿಂದ ಮಾಡಬೇಕು. ಯಾರನ್ನೂ ಕಡೆಗಣಿಸಿಲ್ಲ. ಜಬ್ಬಾರ್ ಕೂಡ ಪ್ರಚಾರಕ್ಕೆ ಬರಬೇಕು” ಎಂದು ಮನವಿ ಮಾಡಿದರು.