ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಯ ಆಯ್ಕೆ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದ್ದು, ಯಾರಿಗೆ ಟಿಕೆಟ್ ನೀಡಲಾಗುತ್ತದೋ ಅವರಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಮಾವನವರಾದ ಶಾಮನೂರು ಶಿವಶಂಕರಪ್ಪ ಅವರನ್ನು ಇಲ್ಲಿನ ಜನತೆ ಆರು ಬಾರಿ ಗೆಲ್ಲಿಸಿ ಶಾಸಕರನ್ನಾಗಿ, ಸಚಿವರನ್ನಾಗಿ ಹಾಗೂ ಸಂಸದರನ್ನಾಗಿ ಮಾಡಿದ್ದಾರೆ. ಈ ನಾಡು ಮತ್ತು ಜನತೆಗೆ ನಾವು ಸದಾ ಚಿರಋಣಿಗಳಾಗಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ: VB-G RAM G: ರಾಜ್ಯಗಳನ್ನೇ ಮರೆತ ಕೇಂದ್ರ ಸರ್ಕಾರ
ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಆಕಾಂಕ್ಷಿಗಳು ಸಭೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಆರೋಗ್ಯಕರ ಬೆಳವಣಿಗೆ ಎಂದರು. “ಇದೇ ಪ್ರಜಾಪ್ರಭುತ್ವ. ಜನಸೇವೆ ಮಾಡಲು ಯಾರು ಸೂಕ್ತರಾಗಿದ್ದಾರೆ ಎನ್ನುವುದನ್ನು ಪಕ್ಷ ಪರಿಶೀಲಿಸಿ, ಅವರ ಹೆಸರುಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡುತ್ತದೆ. ಪಕ್ಷಕ್ಕೂ ಜನರ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ. ಒಟ್ಟಾರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂಬುದೇ ನಮ್ಮ ಮುಖ್ಯ ಗುರಿ” ಎಂದು ತಿಳಿಸಿದರು.
ತಮ್ಮ ಪುತ್ರ ಸಮರ್ಥ್‌ಗೆ ಟಿಕೆಟ್ ಕೊಡಿಸುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್, “ಚುನಾವಣೆ ಸಂದರ್ಭದಲ್ಲಿ ಸಮರ್ಥ್ ನಮ್ಮೆಲ್ಲರ ಪರವಾಗಿ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಸರಳತೆ ಮತ್ತು ಜನಾನುರಾಗದಿಂದ ಜನರು ಅವರಿಗೆ ಪ್ರೀತಿಯ ಆಶೀರ್ವಾದ ನೀಡಿದ್ದಾರೆ. ಆದರೆ ಹಾಗೆಂದ ಮಾತ್ರಕ್ಕೆ ಅವರೇ ಅಭ್ಯರ್ಥಿಯಾಗಬೇಕು ಎಂಬ ನಿರ್ಧಾರ ನಮ್ಮ ಮನಸ್ಸಲ್ಲಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ
ಮತಚೋರಿ ಆರೋಪಗಳ ಕುರಿತು ಮಾತನಾಡಿದ ಅವರು, “ರಾಹುಲ್ ಗಾಂಧಿ ಅವರು ದಾಖಲೆ ಸಮೇತ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ಚುನಾವಣಾ ಆಯೋಗವು ಸಮರ್ಪಕ ಉತ್ತರ ನೀಡದೆ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತದಾನ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದ್ದು, ಅವಸರದಲ್ಲಿ ಮತದಾರರ ಪಟ್ಟಿಯನ್ನು ತಯಾರಿಸಲಾಗುತ್ತಿದೆ ಎಂಬ ಅನುಮಾನವಿದೆ ಎಂದರು.
“ಮತದಾರರ ಪಟ್ಟಿ ಎಷ್ಟು ಪಾರದರ್ಶಕವಾಗಿದೆ ಎಂಬುದೇ ನಮ್ಮ ಪ್ರಮುಖ ಪ್ರಶ್ನೆ. ಈಗಾಗಲೇ ಮತಚೋರಿ ವಿರುದ್ಧ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಜನರಿಗೆ ಜಾಗೃತಿ ಮೂಡಿಸಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: 153 ಎಕರೆಗಳಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ – ಸಚಿವ ಸಂಪುಟದ ಒಪ್ಪಿಗೆ
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮತದಾರರನ್ನು ಸಮಗ್ರವಾಗಿ ಪರಿಶೀಲಿಸಿ ಪಟ್ಟಿ ತಯಾರಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಮಾಹಿತಿ ನೀಡಿದರು.























