Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ದಕ್ಷಿಣ ಉಪಚುನಾವಣೆ LIVE: ಮತದಾನ ಆರಂಭ – ಕ್ಷಣಕ್ಷಣದ ಅಪ್‌ಡೇಟ್

ದಾವಣಗೆರೆ ದಕ್ಷಿಣ ಉಪಚುನಾವಣೆ LIVE: ಮತದಾನ ಆರಂಭ – ಕ್ಷಣಕ್ಷಣದ ಅಪ್‌ಡೇಟ್

0
174

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸುತ್ತಿದ್ದು, ಶಾಂತಿಯುತ ಮತದಾನ ನಡೆಯುತ್ತಿದೆ. ದಿನದ ಬೆಳವಣಿಗೆಗಳ LIVE ಅಪ್‌ಡೇಟ್ ಇಲ್ಲಿದೆ

7:00 ಕ್ಕೆ – ಮತದಾನ ಆರಂಭ: ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಮತದಾನ ಪ್ರಾರಂಭವಾಗಿದೆ.

ಬೆಳಗ್ಗೆ 7 ಗಂಟೆಗೆ ಬಿರುಸಿನ ಮತದಾನ ಆರಂಭವಾಗಿದ್ದು, ಬೂತ್ ನಂಬರ್ 53 ದೇವರಾಜ್ ದೇವರಾಜ್ ಅರಸು ಬಡಾವಣೆಯಲ್ಲಿರುವ ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿರುವ ಬೂತಿನಲ್ಲಿ ಯಶವಂತರಾವ್ ಜಾಧವ್ , ಸುಧಾ ಯಶವಂತರಾವ್ ಜಾಧವ್ ದಂಪತಿ ಮತ ಚಲಾಯಿಸಿದರು.

ತಾಂತ್ರಿಕ ದೋಷ – ತಕ್ಷಣ ಪರಿಹಾರ

ಗ್ರಾಮೀಣ ಭಾಗದ ಕನಗೊಂಡನಹಳ್ಳಿ ಬೂತ್ ನಂ.66ರಲ್ಲಿ ಅಣಕು ಮತದಾನದ ವೇಳೆ ಮತಯಂತ್ರದಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಆದರೆ ಅಧಿಕಾರಿಗಳು ತಕ್ಷಣವೇ ಪರ್ಯಾಯ ಯಂತ್ರ ಅಳವಡಿಸಿ ಮತದಾನವನ್ನು ನಿರಂತರವಾಗಿ ಮುಂದುವರಿಸಿದರು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ದೊಡ್ಡ ಸಮಸ್ಯೆ ವರದಿಯಾಗಿಲ್ಲ. ಈ ನಡುವೆ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿಯವರು ಪಾತಾಳ ಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಜೀಜಾಮಾತಾ ಶಾಲೆ ಭಾಗದ ಸಂಖ್ಯೆ 227 ರಲ್ಲಿ ಮತದಾನ ಮಾಡುವ ಮೂಲಕ ಮತದಾನ ಕೇಂದ್ರಗಳಿಗೆ ತೆರಳಿ ಮತದಾನದ ಹಕ್ಕು ಚಲಾಯಿಸುವಂತೆ ಮತದಾರರಿಗೆ ಮನವಿ ಮಾಡಿದರು.

9:00 AM – 8.90% ಮತದಾನ ದಾಖಲು : ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶೇ.8.90 ನಿರಸ ಮತದಾನವಾಗಿದೆ.

ಈ ಬಾರಿ ಹೆಚ್ಚು ಮತದಾನವಾಗುವ ವಿಶ್ವಾಸ: ಸ್ವೀಪ್ ಸಮಿತಿ ಅಧ್ಯಕ್ಷ ಗಿತ್ತೆ ಮಾಧವ ವಿಠ್ಠಲ್ ರಾವ್

ಕ್ಷೇತ್ರದ ವ್ಯಾಪ್ತಿಯ ಶಿರಮಗೊಂಡನಹಳ್ಳಿ ಸಖಿ ಬೂತ್ ನಂಬರ್ 243 ಮತಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವೀಪ್ ಸಮಿತಿ ಅಧ್ಯಕ್ಷ ಗಿತ್ತೆ ಮಾಧವ ವಿಠ್ಠಲ್ ರಾವ್ ಅವರು , ಕ್ಷೇತ್ರದ ವ್ಯಾಪ್ತಿಯ 284 ಮತಕೇಂದ್ರಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮತದಾರರು ಮತಕೇಂದ್ರಕ್ಕೆ ಬಂದು ಯಾವುದೇ ರೀತಿಯ ಸಮಸ್ಯೆ ಆಗದ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಕನಗೊಂಡನಹಳ್ಳಿ ಬೂತ್ ನಂಬರ್ 66ರಲ್ಲಿ ಅಣಕು ಮತದಾನದ ವೇಳೆ ಮತಯಂತ್ರ ಕೈಕೊಟ್ಟಿತ್ತು. ಕೂಡಲೇ ಬೇರೆ ಮತಯಂತ್ರ ನೀಡಿ ಮತದಾನಕ್ಕೆ ಅವಕಾಶ ನೀಡಲಾಯಿತು. ಇದನ್ನು ಹೊರತು ಪಡಿಸಿ ಬೇರೆ ಎಲ್ಲೂ ಯಾವ ಸಮಸ್ಯೆ ಆಗಿಲ್ಲ. ಸ್ವೀಪ್ ಸಮಿತಿಯಿಂದ ಸಾಕಷ್ಟು ಜಾಗೃತಿ ಮಾಡಿರುವುದರಿಂದ ಈ ಬಾರಿ ಹೆಚ್ಚು ಮತದಾನ ನಡೆಯುವ ವಿಶ್ವಾಸ ಇದೆ ಎಂದು ತಿಳಿಸಿದರು.

ಟಗರಿನೊಂದಿಗೆ ಮತಗಟ್ಟೆವರೆಗೆ ಆಗಮಿಸಿ ಮತದಾನ ಮಾಡಿದ‌ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ..!

ಮತಗಟ್ಟೆಗೆ ಮೊಬೈಲ್ ನಿಷೇಧ

ಕನಗೊಂಡನಹಳ್ಳಿ ಮತಕೇಂದ್ರ ಬೂತ್ ನಂ. 265ರಲ್ಲಿ ಮೊಬೈಲ್ ಗಳಿಗೆ ಒಳಗಡೆ ಪ್ರವೇಶ ನಿಷೇಧಿಸಲಾಗಿತ್ತು. ಹೊರಗಡೆ ಟೇಬಲ್ ಮೇಲೆ ಇಟ್ಟು ಮತದಾರರು ಮತ ಚಲಾಯಿಸಿ ಬಂದು ಅವರ ಮೊಬೈಲ್ ಪಡೆದು ಮನೆಗಳಿಗೆ ಮರಳುತ್ತಿರುವುದು ಸಾಮಾನ್ಯವಾಗಿ ಕಂಡು ಬಂತು.

ಹಳ್ಳಿಗಳಲ್ಲಿ ಮತದಾನ ಬಿರುಸು

ಮತದಾನದಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡರು. ಅಂಗವಿಕಲರು, ವೃದ್ಧರು ಸಹಾಯಕರೊಂದಿಗೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.
ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬಟನ್‌ ಒತ್ತುವ ಮೂಲಕ ಮತಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದಾರೆ. ಕ್ಷೇತ್ರದ 50 ಮತಗಟ್ಟೆಯಲ್ಲಿ ಮತದಾರರು ಹಕ್ಕು ಚಲಾಯಿಸಿದರು. ಎಲ್ಲ ಮತಗಟ್ಟೆಗಳಲ್ಲಿ ಇವಿಎಂಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದವು. ನಿಗದಿತ ಸಮಯಕ್ಕೆ ಆರಂಭವಾದ ಮತದಾನಕ್ಕೆ ಬೆಳಿಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಗ್ರಾಮೀಣ ಭಾಗದಲ್ಲಿ ಮತದಾನ ಬಿರುಸಿನಿಂದ ಕೂಡಿತ್ತು. ಬೆಳಗ್ಗೆಯಿಂದ ಮತಗಟ್ಟೆಗಳಲ್ಲಿ ಸರದಿಯಲ್ಲಿ ನಿಂತಿದ್ದ ಮತದಾರರು ಸೂರ್ಯ ನೆತ್ತಿ ಸುಡುವ ಮುನ್ನವೇ ಮತ ಚಲಾಯಿಸಲು ಮುಂದಾಗಿದ್ದರು.

ಬೆಳಗ್ಗೆ 11 ಗಂಟೆಗೆ ಶೇ.22ರಷ್ಟು ಮತದಾನ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಗುರುವಾರ ಬೆಳಗ್ಗೆಯಿಂದ ಮತದಾನ ಆರಂಭವಾಗಿದ್ದು, ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಶೇ.22ರಷ್ಟು ಮತದಾನವಾಗಿದೆ.