ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಬಕೆಟ್ ಒಂದರಲ್ಲಿ ಆಗ ತಾನೆ ಜನಿಸಿದ ನವಜಾತ ಹೆಣ್ಣು ಶಿಶುವೊಂದನ್ನು ಜನ್ಮ ನೀಡಿದ ತಾಯಿ ಇಟ್ಟು ಪರಾರಿಯಾಗಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯೊಬ್ಬರು ವಾಶ್ ರೂಂ ಸ್ವಚ್ಛತೆ ಮಾಡಲು ಹೋದ ವೇಳೆ ನವಜಾತ ಶಿಶು ಅಳುತ್ತಿರುವ ಶಬ್ದ ಕೇಳಿದ ನಂತರ ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ನರ್ಸ್ ಹಾಗೂ ಇತರೆ ಸಿಬ್ಬಂದಿಗಳು ಸ್ಥಳಕ್ಕೆ ಬಂದು ನೋಡಿದಾಗ ಬಟ್ಟೆಯಲ್ಲಿ ಸುತ್ತಿರುವ ಮಗು ಪತ್ತೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಸ್ಪತ್ರೆಯ ಸ್ಥಾನಿಕ ಆಡಳಿತಾಧಿಕಾರಿ ಡಾ.ಚಂದ್ರಪ್ಪ, ಮಗು ಬೆಳಗ್ಗೆ 9:15ರ ಸುಮಾರಿನಲ್ಲಿ ಶೌಚಾಲಯದ ಬಕೆಟ್‌ನಲ್ಲಿ ಮಗು ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂತು. ತಕ್ಷಣ ಮಗುವಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಲ್ಲೇ ಆರೈಕೆ ಮಾಡುತ್ತಿದ್ದೇವೆ. ಈ ಬಗ್ಗೆ ತಾಲೂಕು ಸಿಡಿಪಿಒ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದರು.
ಅಧಿಕಾರಿಗಳು ದಾವಣಗೆರೆಯಿಂದ ಬಂದು ಹೊನ್ನಾಳಿ ಠಾಣೆಯಲ್ಲಿ ದೂರು ನೀಡಿದ ನಂತರ ದಾವಣಗೆರೆ ಮಕ್ಕಳ ಆರೈಕೆ ಕೇಂದ್ರಕ್ಕೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ತಿಳಿಸಿದ್ದಾರೆ.
ಮಗು ಆರೋಗ್ಯವಾಗಿದೆ: ವಾಶ್ ರೂಂನಲ್ಲಿ ಪತ್ತೆಯಾದ ಮಗುವನ್ನು ಕೂಡಲೇ ಕರೆ ತಂದು ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮಗು ಆರೋಗ್ಯವಾಗಿದೆ ಎಂದು ಸ್ಥಾನಿಕ ವೈಧ್ಯಾಧಿಕಾರಿ ಡಾ.ಚಂದ್ರಪ್ಪ ತಿಳಿಸಿದರು. ಈ ಬಗ್ಗೆ ಹೊನ್ನಾಳಿ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್ ಮಾತನಾಡಿ, ಆಸ್ಪತ್ರೆಯ ಸಿಸಿಟಿವಿಯಿಂದ ಪುಟೇಜ್ ಪಡೆದುಕೊಂಡು ತನಿಖೆ ನಡೆಸುತ್ತಿದ್ದೇವೆ. ಈ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಿ ವಿವರಿಸುವುದಾಗಿ ತಿಳಿಸಿದರು.