ದಾವಣಗೆರೆ: ಡ್ರಗ್ಸ್ ಪ್ರಕರಣದಲ್ಲಿ ಶಾಮನೂರು ಕುಟುಂಬದ ಆಪ್ತ, ಕಾಂಗ್ರೆಸ್ ಮುಖಂಡ ಸೇರಿ ನಾಲ್ವರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡ ಮೂವರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಶಾಮನೂರು ವೇದಮೂರ್ತಿ ಅಲಿಯಾಸ್ ಜಿ. ಎಸ್. ವೇದಮೂರ್ತಿ, ರಾಜಸ್ತಾನ ಮೂಲದ ರಾಮ್ ಸ್ವರೂಪ್, ದೊನಾರಮ್, ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ದೇವಕಿಶನ್ ಬಂಧಿತ ಆರೋಪಿಗಳು. ಇನ್ನು ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ವಿಜಯ್ ಹಜಾರೆ ನಾಳೆಯ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರ
ನಂಬಲರ್ಹ ಮೂಲಗಳ ಮಾಹಿತಿ ಮೇರೆಗೆ ದಾವಣಗೆರೆ ವಿದ್ಯಾನಗರ ಪೊಲೀಸರು ದಾಳಿ ನಡೆಸಿರುವ ವೇಳೆ 290 ಗ್ರಾಂ ಸಿಂಥೆಟಿಕ್ ಡ್ರಗ್ಸ್, 90 ಗ್ರಾಂ ಬ್ರೌನ್ ಶುಗರ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳು ಪತ್ತೆಯಾಗಿವೆ. ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಮೂಲತಃ ರಿಯಲ್ ಎಸ್ಟೇಟ್ ಉದ್ಯನಿಯಾಗಿದ್ದ ಶಾಮನೂರು ವೇದಮೂರ್ತಿ ಕೋಟ್ಯಂತರ ಆಸ್ತಿ ಮಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದರು.ರಾಜಸ್ತಾನ ಮೂಲದ ಆರೋಪಿಗಳಿಂದ ಡ್ರಗ್ಸ್ ತರಿಸಿ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ ಆರೋಪವೂ ಶಾಮನೂರು ವೇದಮೂರ್ತಿ ಮೇಲಿದೆ.









