Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ: ಸುದೀರ್ಘ ತಪಾಸಣೆ

ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ: ಸುದೀರ್ಘ ತಪಾಸಣೆ

0
39

ದಾವಣಗೆರೆ: ಜಿಲ್ಲೆಯ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸಕ್ಕೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಕರೆ ಮಾಡಿದ ಘಟನೆ ಬುಧವಾರ ಮಧ್ಯಾಹ್ನ ಆತಂಕ ಸೃಷ್ಟಿಸಿತು. ಆದರೆ ಸುದೀರ್ಘ ತಪಾಸಣೆಯ ನಂತರ ಇದೊಂದು ಹುಸಿ ಕರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಮಧ್ಯಾಹ್ನ ಸುಮಾರು 2.30ರ ಸುಮಾರಿಗೆ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ ವ್ಯಕ್ತಿಯೊಬ್ಬರು, ನಗರದ ರಿಂಗ್ ರಸ್ತೆಯಲ್ಲಿರುವ ಜಿಲ್ಲಾಧಿಕಾರಿಗಳ ನಿವಾಸವನ್ನು ಮುಂದಿನ 45 ನಿಮಿಷಗಳಲ್ಲಿ ಬಾಂಬ್ ದಾಳಿಯಿಂದ ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದರು.

ತುರ್ತು ಕಾರ್ಯಾಚರಣೆ : ಬೆದರಿಕೆ ಕರೆ ಬಂದ ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ನಿವಾಸದ ಒಳಾಂಗಣ ಮತ್ತು ಹೊರಾಂಗಣದ ಪ್ರತಿಯೊಂದು ಮೂಲೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು.

ಸುಮಾರು ಎರಡು-ಮೂರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಬಳಿಕ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಹುಸಿ ಬಾಂಬ್ ಕರೆ ಎಂದು ದೃಢಪಡಿಸಲಾಯಿತು.

ಮರುಕಳಿಸುತ್ತಿರುವ ಬೆದರಿಕೆ ಕರೆಗಳು : ಜಿಲ್ಲೆಯಲ್ಲಿ ಇಂತಹ ಬೆದರಿಕೆ ಕರೆಗಳು ಪದೇ ಪದೇ ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಐದಾರು ತಿಂಗಳ ಹಿಂದೆ ಜಿಲ್ಲಾಡಳಿತ ಭವನಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ನಂತರ ಜಿಲ್ಲಾ ನ್ಯಾಯಾಲಯಕ್ಕೂ ಇಂತಹ ಸಂದೇಶ ಬಂದಿತ್ತು. ಇದೀಗ ನೇರವಾಗಿ ಜಿಲ್ಲಾಧಿಕಾರಿಗಳ ನಿವಾಸವನ್ನೇ ಗುರಿಯಾಗಿಸಿಕೊಂಡು ಕರೆ ಮಾಡಿರುವುದು ಗಂಭೀರ ಸಂಗತಿ ಎಂದು ಹೇಳಲಾಗುತ್ತಿದೆ.

ತನಿಖೆ ಆರಂಭ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್. ತೆಕ್ಕಣ್ಣನವರ್ ಸಂಯುಕ್ತ ಕರ್ನಾಟಕಕ್ಕೆ ಮಾಹಿತಿ ನೀಡಿದ್ದು, “ತಪಾಸಣೆಯಲ್ಲಿ ಇದು ಹುಸಿ ಕರೆ ಎಂಬುದು ದೃಢವಾಗಿದೆ. 112 ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಯನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುತ್ತದೆ” ಎಂದು ತಿಳಿಸಿದ್ದಾರೆ.

ಪ್ರಸ್ತುತ ಜಿಲ್ಲಾಧಿಕಾರಿಗಳ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಬೇಡವೆಂದು ಪೊಲೀಸರು ಮನವಿ ಮಾಡಿದ್ದಾರೆ.