ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಅಖಾಡಾ ಸದ್ಯ ಮತ್ತಷ್ಟು ರಂಗೇರಿದೆ. ಘಟಾನುಘಟಿಗಳ ಮನವೊಲಿಕೆಯ ಶತಪ್ರಯತ್ನದ ನಡುವೆಯೂ ಪೈಲ್ವಾನ್ ತೊಡೆ ತಟ್ಟಿ ನಿಂತಿದ್ದಾರೆ.
ಯಾರೇ ಬರಲಿ ಏನೇ ಹೇಳಲಿ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದಿರುವ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅಂತಿಮವಾಗಿ ಕಣದಲ್ಲಿಯೇ ಉಳಿದುಕೊಂಡಿದ್ದಾರೆ.
ದಾವಣಗೆರೆ ಬೈ ಎಲೆಕ್ಷನ್ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಧಿಕೃತವಾಗಿ ಸ್ಪರ್ಧೆಗೆ ಇಳಿದಿರುವ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ್ ಶಾಮನೂರು ಗೆಲ್ಲಲು ಅತ್ಯಂತ ಸಮರ್ಥ ಎನ್ನುವ ದೃಷ್ಟಿಯಲ್ಲಿ ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿಯನ್ನು ಫೈನಲ್ ಮಾಡಿತ್ತು.
ಆದರೆ, ನಲವತ್ತು ವರ್ಷಗಳ ಕಾಲ ಶಾಮನೂರು ಶಿವಶಂಕರಪ್ಪ ಅವರ ಜತೆಗಿದ್ದ ಪೈಲ್ವಾನ್ ಇಂದು ಅವರ ಮೊಮ್ಮಗನ ವಿರುದ್ಧವೇ ಸ್ಪರ್ಧೆಗೆ ತಯಾರಾಗಿದ್ದಾರೆ. ಟಿಕೆಟ್ ಕೈ ತಪ್ಪಿದ ಬಳಿಕ ಬಂಡಾಯದ ಬಾವುಟ ಹಾರಿಸಿದ ಪೈಲ್ವಾನ್ ಮನವೊಲಿಸಲು ಕಾಂಗ್ರೆಸ್‌ನ ನಾಯಕರು ಅನೇಕ ಕಸರತ್ತುಗಳನ್ನು ಮಾಡಿದರಾದರೂ ಯಾವುವೂ ಫಲಪ್ರದವಾಗಲಿಲ್ಲ.
ಗುರುವಾರ ಬೆಳಗ್ಗೆಯಿಂದಲೇ ಮುಸ್ಲಿಂ ನಾಯಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ರಿಜ್ವಾನ್ ಅರ್ಷದ್, ಪೈಲ್ವಾನ್ ಅವರ ಜತೆ ಮಾತಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ ಮಧ್ಯಾಹ್ನ 2.50ರ ಸುಮಾರಿಗೆ ನಾಮಪತ್ರ ವಾಪಸ್ ಪಡೆಯಲು ಸೂಚಕ-ಅನುಮೋದಕರು ಬಂದಿದ್ದು, ಸಹಿ ಹೊಂದಾಣಿಕೆಯಾಗದ ಕಾರಣ ಚುನಾವಣಾಧಿಕಾರಿಗಳು ಅರ್ಜಿ ತಿರಸ್ಕರಿಸಿದ್ದಾರೆ.
ನಾಮಪತ್ರ ಹಿಂಪಡೆಯುವ ಅವಧಿ ಮುಗಿದ ಬಳಿಕವೂ ಸಾದಿಕ್ ಮನೆಯಲ್ಲಿ ಮುಖಂಡರುಗಳ ಮಾತುಕತೆ ಮುಂದುವರಿದಿತ್ತು, ಇದಾದ ಬಳಿಕ ಸಲೀಂ ಅಹ್ಮದ, ರಿಜ್ವಾನ್ ಹೊರಬಂದು “ನಾಮಪತ್ರ ಹಿಂಪಡೆಯುವ ಸಮಯ ಮುಗಿದಿದೆ. ಸಾದಿಕ್ ಅವರೊಂದಿಗೆ ಇನ್ನೊಮ್ಮೆ ಮಾತಾಡುತ್ತೇವೆ. ಅವರು ಕಾಂಗ್ರೆಸ್‌ನೊಂದಿಗೆ ಇರುತ್ತಾರೆ. ಅವರಿಗೆ ಪಕ್ಷದಿಂದ ಏನು ಅನುಕೂಲ ಮಾಡಬೇಕೋ ಮಾಡಿ ಕೊಡುತ್ತೇವೆ” ಹೇಳಿದ್ದಾರೆ.
ದಾವಣಗೆರೆ ಕ್ಷೇತ್ರದ ಚುನಾವಣಾ ಇತಿಹಾಸವನ್ನು ನೋಡಿದರೆ, ಕಳೆದ 15 ಚುನಾವಣೆಗಳಲ್ಲಿ 45ಕ್ಕೂ ಅಧಿಕ ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ ಯಾರೊಬ್ಬರೂ ಗೆಲುವಿನ ರುಚಿ ಅನುಭವಿಸಿಲ್ಲ. ಈ ಬಾರಿ ಸಾದಿಕ್ ಪೈಲ್ವಾನ್ ಇತಿಹಾಸ ಸೃಷ್ಟಿಸುವರೇ ಎನ್ನುವುದಕ್ಕೆ ಮೇ 4ರ ವರೆಗೆ ಕಾಯಬೇಕಿದೆ.






















