Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ಉಪಚುನಾವಣೆ: ಪೈಲ್ವಾನ್‌ ಮನವೊಲಿಸುವಲ್ಲಿ ಸಿಎಂ ಯಶಸ್ವಿ

ದಾವಣಗೆರೆ ಉಪಚುನಾವಣೆ: ಪೈಲ್ವಾನ್‌ ಮನವೊಲಿಸುವಲ್ಲಿ ಸಿಎಂ ಯಶಸ್ವಿ

0
131

ದಾವಣಗೆರೆ: ಪರಮಾತ್ಮ ಬಂದು ಹೇಳಿದರೂ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ… ಎಂದು ಹೇಳಿ ಹಟ ಹಿಡಿದು ಕುಳಿತಿದ್ದ ಸಾದಿಕ್‌ ಪೈಲ್ವಾನ್‌ ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಸಾದಿಕ್‌ ಪೈಲ್ವಾನ್ ಬಿ ಫಾರಂ ಸಿಗಲಿಲ್ಲವೆಂದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.

ಶಾಮನೂರು ಶಿವಶಂಕರಪ್ಪನವರೊಂದಿಗೆ ಸುಮಾರು 40 ವರ್ಷಗಳ ಕಾಲ ಜತೆಗಿದ್ದ ಪೈಲ್ವಾನ್‌ ಈ ಬಾರಿ ಟಿಕೆಟ್‌ ದೊರೆಯುತ್ತದೆ ಎಂಬ ಆಸೆಯನ್ನು ಇಟ್ಟುಕೊಂಡಿದ್ದರು. ಆದರೆ ಎಸ್‌.ಎಸ್ ಮಲ್ಲಿಕಾರ್ಜುನ ಪುತ್ರ ಸಮರ್ಥ್‌ಗೆ ಟಿಕೆಟ್‌ ನೀಡಲಾಗಿತ್ತು.

ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರ ಬೆಳಗ್ಗೆಯಿಂದಲೇ ಮುಸ್ಲಿಂ ನಾಯಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ರಿಜ್ವಾನ್ ಅರ್ಷದ್, ಪೈಲ್ವಾನ್‌ಅವರ ಜತೆ ಮಾತಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ನಾಮಪತ್ರ ಹಿಂಪಡೆಯುವ ಅವಧಿ ಮುಗಿದ ಬಳಿಕವೂ ಸಾದಿಕ್ ಮನೆಯಲ್ಲಿ ಮುಖಂಡರುಗಳ ಮಾತುಕತೆ ಮುಂದುವರಿದಿತ್ತು, ಇದಾದ ಬಳಿಕ ಸಲೀಂ ಅಹ್ಮದ, ರಿಜ್ವಾನ್ ಹೊರಬಂದು “ನಾಮಪತ್ರ ಹಿಂಪಡೆಯುವ ಸಮಯ ಮುಗಿದಿದೆ. ಸಾದಿಕ್ ಅವರೊಂದಿಗೆ ಇನ್ನೊಮ್ಮೆ ಮಾತಾಡುತ್ತೇವೆ. ಅವರು ಕಾಂಗ್ರೆಸ್‌ನೊಂದಿಗೆ ಇರುತ್ತಾರೆ. ಅವರಿಗೆ ಪಕ್ಷದಿಂದ ಏನು ಅನುಕೂಲ ಮಾಡಬೇಕೋ ಮಾಡಿ ಕೊಡುತ್ತೇವೆ” ಹೇಳಿದ್ದರು.

ರಿಜ್ವಾನ್ ಮತ್ತು ಸಲೀಂ ಅವರು ಸಾದಿಕ್ ಪೈಲ್ವಾನ್‌ ಅವರನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಕರೆತಂದಿದ್ದಾರೆ. ಈ ವೇಳೆ ಸಾದಿಕ್ ಪೈಲ್ವಾನ್ ಜತೆಗೆ ಸಿದ್ದರಾಮಯ್ಯ ಕೆಲಕಾಲ ಮಾತುಕತೆ ನಡೆಸಿದ್ದು, ಏನೇ ಸಮಸ್ಯೆ ಇದ್ದರೂ ಬಗೆಹರಿಸೋಣ ಎಂದು ಭರವಸೆ ನೀಡಿದ್ದಾರೆ.

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಬೇಕಿದ್ದು, ಮುನಿಸು ಮರೆತು ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವಂತೆ ಸಿಎಂ ಮನವಿ ಮಾಡಿದ್ದು, ಅದಕ್ಕೆ ಸಾದಿಕ್‌ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.