ದಾವಣಗೆರೆ: ರಂಜಾನ್ ಹಬ್ಬದ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಆನಗೋಡು ಗ್ರಾಮದ ಈದ್ಗಾ ಮೈದಾನದಲ್ಲಿ ಹೆಜ್ಜೇನು ದಾಳಿ ನಡೆಸಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಪ್ರಾರ್ಥನೆ ವೇಳೆ ದಾಳಿ: ಈದ್ಗಾ ಮೈದಾನದಲ್ಲಿ ನೂರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನುಗಳ ಗುಂಪು ದಾಳಿ ನಡೆಸಿದೆ. ಇದರಿಂದ ಪ್ರಾರ್ಥನೆಗೆ ಆಗಮಿಸಿದ್ದವರು ಭೀತಿಗೊಳಗಾಗಿ ಓಡಾಡಿದ ಪರಿಣಾಮ ಗೊಂದಲ ಉಂಟಾಯಿತು.
ಗಾಯಾಳುಗಳು: ಗಾಯಗೊಂಡವರಲ್ಲಿ ಆಸೀಪ್ ಅಲಿ (28), ಶಫೀವುಲ್ಲಾ (50), ಗಂಗಜ್ಜಿ (65), ಸನಾವುಲ್ಲಾ ಸಾಬ್ (65), ಸಿರಾಜ್ (46), ಇಸಾದ್ (42), ಹನೀಫ್ ಅಲಿ (30), ಯೂಸೀಪ್ ಅಲಿ (30) ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ. ಪಾದಚಾರಿಗಳು, ಸ್ಥಳದಲ್ಲಿದ್ದ ಪೊಲೀಸರು ಮತ್ತು ಬಂದೋಬಸ್ತ್‌ಗೆ ನಿಯೋಜಿಸಲಾಗಿದ್ದ ಎಎಸ್‌ಐ ನಾರಪ್ಪ ಸೇರಿದಂತೆ ಸಿಬ್ಬಂದಿಗೂ ಗಾಯಗಳಾಗಿವೆ.
ಆಸ್ಪತ್ರೆಗೆ ದಾಖಲು: ಗಾಯಾಳುಗಳನ್ನು ತಕ್ಷಣವೇ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ (Chigateri District Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಮಕ್ಕಳು ಸೇರಿದಂತೆ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತುರ್ತು ಚಿಕಿತ್ಸೆ ವ್ಯವಸ್ಥೆ: ಘಟನೆಯ ಮಾಹಿತಿ ತಿಳಿದು ತಕ್ಷಣ ಆಸ್ಪತ್ರೆಗೆ ಧಾವಿಸಿದ ಶಾಸಕ ಕೆ.ಎಸ್.ಬಸವಂತಪ್ಪ (K. S. Basavanthappa) ಗಾಯಾಳುಗಳ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ನಿರತರಾಗಿದ್ದಾರೆ. ಡಿಎಚ್‌ಒ, ಟಿಎಚ್‌ಒ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಚಿಕಿತ್ಸೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.






















