Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ಉಪಚುನಾವಣೆ: ಜಮೀರ್ ವಿರುದ್ಧ ಮಲ್ಲಿಕಾರ್ಜುನ್ ಕಿಡಿ

ದಾವಣಗೆರೆ ಉಪಚುನಾವಣೆ: ಜಮೀರ್ ವಿರುದ್ಧ ಮಲ್ಲಿಕಾರ್ಜುನ್ ಕಿಡಿ

0
114

“ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ಅವನ್ಯಾರು?” – ಜಮೀರ್ ವಿರುದ್ಧ ಮಲ್ಲಿಕಾರ್ಜುನ್ ಆಕ್ರೋಶ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಮಧ್ಯೆ ಭಿನ್ನಮತ ಬಹಿರಂಗಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸ್ವಪಕ್ಷದ ಸಚಿವ ಜಮೀರ್ ಅಹಮದ್ ಖಾನ್‌ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಲ್ಲಿಕಾರ್ಜುನ್, ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೊರಗಿನವರ ಹಸ್ತಕ್ಷೇಪ ಸರಿಯಲ್ಲ ಎಂದು ಹೇಳಿ ಪರೋಕ್ಷವಾಗಿ ಜಮೀರ್ ಅಹಮದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ಅವನ್ಯಾರು? ನಮ್ಮ ಕ್ಷೇತ್ರದ ವಿಚಾರದಲ್ಲಿ ಇತರರು ಮಾತನಾಡುವುದು ಸರಿಯಲ್ಲ,” ಎಂದು ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ವಿಚಾರ : ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯವನ್ನು ಸಚಿವ ಜಮೀರ್ ಅಹಮದ್ ವ್ಯಕ್ತಪಡಿಸಿದ್ದಾರೆಯೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್, ಕ್ಷೇತ್ರದ ಆಂತರಿಕ ರಾಜಕೀಯದಲ್ಲಿ ಬೇರೆಯವರ ಹಸ್ತಕ್ಷೇಪ ಅನಗತ್ಯ ಎಂದು ಹೇಳಿದರು.

ಈ ಕ್ಷೇತ್ರದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಬದುಕಿದ್ದಾಗ ದಕ್ಷಿಣ ಕ್ಷೇತ್ರದಲ್ಲಿ ಮುಂದಿನ ಬಾರಿ ಮುಸ್ಲಿಂ ಸಮುದಾಯದವರಿಗೆ ಅವಕಾಶ ನೀಡಬೇಕು ಎಂಬ ಮಾತು ಹೇಳಿದ್ದಾರೆಯೆಂಬ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಕೂಡ ಮಲ್ಲಿಕಾರ್ಜುನ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಹೈಕಮಾಂಡ್ ನಿರ್ಧಾರವೇ ಅಂತಿಮ : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ ಅಂತಿಮ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಯುಗಾದಿಯ ನಂತರ ನಿರ್ಧಾರ ಸಾಧ್ಯತೆ : ಮುಂದಿನ ದಿನಗಳಲ್ಲಿ ಯುಗಾದಿ ಹಬ್ಬದ ಚಂದ್ರದರ್ಶನದ ನಂತರ ಅಭ್ಯರ್ಥಿ ಆಯ್ಕೆ ಕುರಿತು ಪಕ್ಷ ಅಧಿಕೃತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.

ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಹೇಗೆ ಮುಂದುವರಿಯಲಿದೆ ಎಂಬುದನ್ನು ಕಾದುನೋಡಲಾಗುತ್ತಿದೆ.