ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದರು.
ಮೆರವಣಿಗೆಗೆ ಮುನ್ನವೇ ತಮ್ಮ ಪತ್ನಿ ಹಾಗೂ ಪಕ್ಷದ ಪ್ರಮುಖ ಮುಖಂಡರೊಂದಿಗೆ ತೆರಳಿ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಬಳಿಕ ದುರ್ಗಾಂಬಿಕಾ ದೇವಸ್ಥಾನದಿಂದ ಭರ್ಜರಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿ.ಟಿ.ರವಿ, ಅಜಯ್ ಕುಮಾರ್, ರೇಣುಕಾಚಾರ್ಯ, ಮಾಜಿ ಸಂಸದ ಜಿ.ಎಂ.ಸಿದ್ಧೇಶ್ವರ, ಗಾಯತ್ರಿ ಸಿದ್ದೇಶ್ವರ, ಜಿ.ಬಿ.ವಿನಯಕುಮಾರ್, ಎಚ್.ಎಸ್.ಶಿವಶಂಕರ್, ಬಂಗಾರು ಹನುಮಂತು, ರಘು ಕೌಟಿಲ್ಯ ಸೇರಿದಂತೆ ರಾಜ್ಯ ನಾಯಕರು, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು.
ನಾಮಪತ್ರ ಸಲ್ಲಿಕೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀನಿವಾಸ್ ದಾಸ್ ಕರಿಯಪ್ಪ, “ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬದಲಾವಣೆ ಖಚಿತ. ಸಾಮಾನ್ಯ ಕುಟುಂಬದ ಮಗನಾಗಿ ವಿಧಾನಸಭೆಗೆ ಪ್ರವೇಶ ಮಾಡುವ ಕನಸು ನನಸಾಗಲಿದೆ. ಜನರು ಬಿಜೆಪಿಗೆ ಮತದಾನ ಮಾಡಲು ಕಾತುರರಾಗಿದ್ದಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ನೇರ ಟೀಕೆ ಮಾಡದೇ, “ನನ್ನ ಎದುರಾಳಿ ಕಾಂಗ್ರೆಸ್ ಮಾತ್ರ. ಅವರ ಒಳಜಗಳದ ಬಗ್ಗೆ ಮಾತನಾಡುವುದಿಲ್ಲ. ನಾವು ನಮ್ಮ ಗೆಲುವಿನ ತಂತ್ರದಲ್ಲಿ ಗಮನ ಹರಿಸುತ್ತೇವೆ,” ಎಂದು ಹೇಳಿದರು.
ಸುದ್ದಿಯ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಅಪ್‌ಡೇಟ್ ಆಗಲಿವೆ…




















