ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್‌ನಲ್ಲಿ ಮೂಡಿದ್ದ ಅಸಮಾಧಾನಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವ ಜಮೀರ್ ಅಹಮದ್ ಖಾನ್, ಪರಸ್ಪರ ಆಲಿಂಗಿಸಿ ಒಗ್ಗಟ್ಟಿನ ಸಂದೇಶ ನೀಡಿದ್ದಾರೆ.
ಅಸಮಾಧಾನಕ್ಕೆ ಅಂತ್ಯ : ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದ ಜಮೀರ್ ಅಹಮದ್, ಹೈಕಮಾಂಡ್ ಮಟ್ಟದಲ್ಲಿಯೂ ಲಾಬಿ ನಡೆಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ಘೋಷಿಸಿತ್ತು.
ಇದರಿಂದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸ್ವಲ್ಪ ಗೊಂದಲ ಉಂಟಾಗಿತ್ತು. ಆದರೆ ಭಾನುವಾರ ಇಬ್ಬರು ನಾಯಕರು ಭೇಟಿಯಾಗಿ ಪರಸ್ಪರ ತಬ್ಬಿಕೊಂಡು ಒಗ್ಗಟ್ಟಿನ ಸಂದೇಶ ನೀಡುವ ಮೂಲಕ ಆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಕಾಂಗ್ರೆಸ್ ಪ್ರಚಾರಕ್ಕೆ ವೇಗ : ಈ ಬೆಳವಣಿಗೆಯ ನಂತರ ಕಾಂಗ್ರೆಸ್ ಪಕ್ಷ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತನ್ನ ಪ್ರಚಾರ ಕಾರ್ಯಗಳನ್ನು ಮತ್ತಷ್ಟು ಚುರುಕುಗೊಳಿಸಿದೆ. ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಎಲ್ಲಾ ನಾಯಕರು ಒಂದಾಗಿ ಕೆಲಸ ಮಾಡುತ್ತಿದ್ದಾರೆ.
ಭೇಟಿಯ ನಂತರ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಕಂಡುಬಂದಿದೆ. ಜಮೀರ್ ಅಹಮದ್ ಕೂಡ ಕ್ಷೇತ್ರದಲ್ಲಿ ಸಕ್ರಿಯವಾಗಿ ಪ್ರಚಾರಕ್ಕೆ ಇಳಿಯಲಿದ್ದು, ವಿವಿಧ ಸಮುದಾಯಗಳೊಂದಿಗೆ ಸಭೆಗಳು ನಡೆಸುವ ಸಾಧ್ಯತೆ ಇದೆ. ಪಕ್ಷದ ಒಳಜಗಳ ನಿವಾರಣೆಯಾಗಿ ಈಗ ಸಂಪೂರ್ಣ ಶಕ್ತಿಯಿಂದ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ.























