ದಾವಣಗೆರೆ: ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಟ್ಟು, ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿರುವುದರ ಬಗ್ಗೆ ಪರೋಕ್ಷವಾಗಿ ವಿಷಯ ಹರಿಬಿಟ್ಟಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ರಾಜೀವ್ ಪಿ. ಕುಡುಚಿ ಆರೋಪಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ರೈತರ ಆತ್ಮಹತ್ಯೆ, ಸರ್ಕಾರಿ ನೌಕರರ ಮತ್ತು ಗುತ್ತಿಗೆದಾರರ ಆತ್ಮಹತ್ಯೆಗಳು ಹೆಚ್ಚಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇಂಥ ವೈಫಲ್ಯಗಳನ್ನು ಮುಚ್ಚಿಡಲು ವ್ಯವಸ್ಥಿತವಾಗಿ ಈಗ ಯತೀಂದ್ರ ಅವರಿಂದ ಮುಂದಿನ ನಾಯಕ ಸತೀಶ್ ಜಾರಕಿಹೊಳಿ ಎಂದು ಹೇಳಿಸಿ, ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದರು.
ಮಾತೆತ್ತಿದರೆ ಕೆಂದ್ರ ಸರ್ಕಾರ ರಾಜ್ಯದ ಜಿಎಸ್ ಟಿ ಪಾಲನ್ನು ನೀಡದೆ ತಾರತಮ್ಯ ಮಾಡುತ್ತಿದೆ ಎನ್ನುವ ಸಿಎಂ ಸಿದ್ಧರಾಮಯ್ಯ ತೆರಿಗೆ ಹಣ ನೀಡದೆ ಯಾವ ಆಧಾರದಲ್ಲಿ ಮೂರು ಬಜೆಟ್ ಮಂಡಿಸಿದ್ದಾರೆ? ಹಣಕಾಸು ಆಯೋಗ ಶಿಫಾರಸ್ಸು ಮಾಡಿರುವ ಎಲ್ಲಾ ಹಣವೂ ಕೆಂದ್ರದಿಂದ ರಾಜ್ಯಕ್ಕೆ ಬಂದಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ನಲ್ಲಿರುವಂತೆ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವ ಪ್ರಶ್ನೆಯೇ ಇಲ್ಲ. ಅರ್ಹತೆಯಿದ್ದವರು ಮಾತ್ರ ಇಲ್ಲಿ ನಾಯಕರಾಗುತ್ತಾರೆ. ಅದೇ ರೀತಿ ಬಿ.ವೈ. ವಿಜಯೇಂದ್ರ ಮತ್ತು ಬಿ.ವೈ. ರಾಘವೇಂದ್ರ ಅರ್ಹತೆಗನುಸಾರ ನಾಯಕರಾಗಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


























