ಕಾಂಗ್ರೆಸ್‌ದು ದಿಕ್ಕು ತಪ್ಪಿಸುವ ತಂತ್ರ; ಸಂಸದ ಯದುವೀರ್ ಒಡೆಯರ್

0
4

ದಾವಣಗೆರೆ: ವಿಕಸಿತ ಭಾರತ ಗಾಂಧೀಜಿ ಕನಸು, ಅವರ ಆದರ್ಶಗಳು ನಮ್ಮ ದೇಶದಲ್ಲಿ ಜೀವಿತವಾಗಿವೆ. ಅದಕ್ಕೆ ನಮ್ಮ ಕೇಂದ್ರ ಕೂಡ ಪುಷ್ಠಿ ನೀಡುತ್ತಿದೆ ಎಂದು ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನದ್ದು ದಿಕ್ಕು ತಪ್ಪಿಸುವ ತಂತ್ರ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕಸಿತ ಭಾರತ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಮಹಾತ್ಮ ಗಾಂಧಿ ಹೆಸರು ಜೀವಿತವಾಗಿದೆ. ಕಾಂಗ್ರೆಸ್ ಪಕ್ಷದ ಎಸ್ಐಆರ್ ಹೋರಾಟ ವಿಫಲವಾಯಿತು. ಇವರದ್ದು ಕೇವಲ ಚುನಾವಣೆ ತಂತ್ರಗಾರಿಕೆ ಅಂತಾ ಜನರಿಗೆ ಗೊತ್ತಾಗಿದೆ ಎಂದು ಕುಟುಕಿದರು.

ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ಮಾಡುವುದನ್ನು ಪ್ರಥಮ ಆದ್ಯತೆ ಮಾಡಿಕೊಳ್ಳಬೇಕಾದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಮುಖ್ಯಮಂತ್ರಿ ಕುರ್ಚಿಗಾಗಿ ಹಗ್ಗ ಜಗ್ಗಾಟದಲ್ಲಿ ತೊಡಗಿರುವುದು ಖಂಡನೀಯ. ಇದರಿಂದ ರಾಜ್ಯಕ್ಕೆ ಹಿನ್ನಡೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದೇವೆ, ಮುಂದೆಯೂ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿದೆ ಎಂದರು.

ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಯದುವೀರ್ ಏನೇ ಇದ್ದರೂ ತನಿಖಾ ವರದಿಗಾಗಿ ನಾವು ಕಾಯಬೇಕಾಗುತ್ತೆ. ತಜ್ಞರ ವರದಿಗೂ ಮುನ್ನ ಹೇಳಿಕೆ ನೀಡುವುದು ತರವಲ್ಲ. ಆ ಬಗ್ಗೆ ಅಧಿಕೃತವಾಗಿ ವರದಿ ಬರಲಿ ಎಂದರು.

ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಒತ್ತುವರಿ ತೆರವು ವಿಚಾರದಲ್ಲಿ ಕೇರಳ ಸರ್ಕಾರ ಪ್ರವೇಶಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಅವರ ತಂತ್ರಗಾರಿಕೆ ಇತ್ಯಾದಿ ಅವರನ್ನೇ ಕೇಳಬೇಕು. ಅಕ್ರಮವೋ ಅಧಿಕೃತವೋ ನಮ್ಮ ನ್ಯಾಯಾಲಯ, ಅಧಿಕಾರಿಗಳು ತೀರ್ಮಾನ ಮಾಡ್ತಾರೆ. ಕಾಂಗ್ರೆಸ್‌‌ನ ತಂತ್ರಗಾರಿಕೆ ಬಗ್ಗೆ ನಾನು ಹೇಳಲಾಗುವುದಿಲ್ಲ. ಕಾನೂನು ಪ್ರಕಾರ ಮುಂದುವರಿಯುವುದು ಒಳ್ಳೆಯದು. ಕಾನೂನಾತ್ಮಕವಾಗಿ ಕೆಲಸ ಮಾಡಿ ಎಂದು ಒತ್ತಾಯಿಸಿದರು.

ಬೆಂಗಳೂರಿನ ಡ್ರಗ್ಸ್ ಫ್ಯಾಕ್ಟರಿ ಮೇಲೆ ಮಹಾರಾಷ್ಟ್ರ ಪೊಲೀಸರ ದಾಳಿ ಪ್ರಕರಣ ವಿಷಯವಾಗಿ ಪ್ರತಿಕ್ರಿಯಿಸಿದ ಯದುವೀರ್, ರಾಜ್ಯ ಪೊಲೀಸ್ ಇಲಾಖೆಗೆ ಸ್ವಾತಂತ್ರ್ಯ ನೀಡಬೇಕು. ಕೆಲವು ವಿಚಾರದಲ್ಲಿ ತನಿಖೆ ಪ್ರಕಾರ ಮಹಾರಾಷ್ಟ್ರ ಪೊಲೀಸರಿಗೆ ಸ್ವಾತಂತ್ರ್ಯ ಇದೆ. ಇದೇ ರೀತಿ ಮೈಸೂರಿನಲ್ಲಿಯೂ ಸಹ ಕಾರ್ಯಾಚರಣೆ ಆಗಿತ್ತು. ನಮ್ಮಲ್ಲಿ ಒಳ್ಳೆಯ ಗುಪ್ತಚರ ಇಲಾಖೆ, ಕಾನೂನು ಸುವ್ಯವಸ್ಥೆ ಇದೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಬೇಕು, ಅವರು ಕೊಟ್ಟ ಸಲಹೆ, ವರದಿ ಮೇಲೆ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

Previous articleರಿವೈಂಡ್ 2025: ಮರೆಯಾದ ಮಹನೀಯರು