ದಾವಣಗೆರೆ: “ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿರುವುದರಿಂದ ಜನರ ಗಮನ ಬೇರೆಡೆ ಸೆಳೆಯಲು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ನಾವಿದನ್ನೂ ತೀವ್ರವಾಗಿ ಖಂಡಿಸುತ್ತೇವೆ” ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಸರ್ಕಾರದ ವಿರುದ್ಧ ಹರಿಹಾಯ್ದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಧರ್ಮಸ್ಥಳ ಅಪಪ್ರಚಾರ ಇದೊಂದು ಸರ್ಕಾರದ ಷಡ್ಯಂತ್ರ. ಮತ ತುಷ್ಠಿಕರಣಕ್ಕೆ ಕಾಂಗ್ರೆಸ್ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಯಾರೋ ಅನಾಮಿಕ ಹೇಳಿದ ಕಡೆಗಳಲ್ಲಿ ಸುಮಾರು 30 ಅಡಿ ಭೂಮಿ ಅಗೆದು ಶವ ಹುಡುಕಿದ್ದಾರೆ ಎಂದರೆ ಇದು ಸರ್ಕಾರದ ಮೂರ್ಖತನದ ಪರಮಾವಧಿ” ಎಂದು ಕಿಡಿಕಾರಿದರು.
“ಸರ್ಕಾರ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಬೇರೆ ಧರ್ಮದವರ ತುಷ್ಠಿಕರಣ ಮಾಡಲು ಜೊತೆಗೆ ಹಿಂದೂ ಧರ್ಮವನ್ನು ತುಳಿಯಲು ಹೀಗೆ ಮಾಡಿದೆ. ಅನಾಮಿಕನ ಮಾನಸಿಕ ಸ್ಥಿತಿ ಬಗ್ಗೆಯೂ ಪರಾಮರ್ಶಿಸಿ ಎಂದು ನಾನು ಪೋಸ್ಟ್ ಹಾಕಿದ್ದೆ. ಈಗ ಸರ್ಕಾರಕ್ಕೆ ಜ್ಞಾನೋದಯವಾಗಿದ್ದು, ಆತನ ಪೂರ್ವಾಪರ ವಿಚಾರಿಸುವ ಕೆಲಸ ಮಾಡುತ್ತಿದ್ದಾರೆ” ಎಂದರು.
“ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದನ್ನು ಮುಚ್ಚಿಹಾಕಿಕೊಳ್ಳಲು ಏನಾದರೂ ಒಂದು ಎಳೆದು ತರುತ್ತಿದ್ದಾರೆ. ತಿರುಪತಿ, ಶಬರಿಮಲೆ ಆಯ್ತು ಈಗ ಧರ್ಮಸ್ಥಳದ ಬಗ್ಗೆ ಕೂಡ ಅಪಪ್ರಚಾರ ಮಾಡ್ತಾ ಇದಾರೆ. ಇದನ್ನು ಹಿಂದೂಗಳಾದ ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದರು.
ಆರ್‌ಎಸ್‌ಎಸ್ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಫ್ಟ್ ಕಾರ್ನರ್ ತೋರಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಬಂಡೆ ಈಗ ಏಕೆ ಕರಗಿ ಹೋಗಿದೆ ಎಂದು ಡಿಕೆಶಿ ಅವರನ್ನೇ ಕೇಳಬೇಕು” ಎಂದು ಹೇಳಿದರು.
“ಪರಿಶಿಷ್ಟರ ಅನುದಾನವನ್ನೂ ಕಾಂಗ್ರೆಸ್ ಸರ್ಕಾರ ನುಂಗಿ ಹಾಕಿದೆ. ಮೀಸಲಾತಿ ವಿಚಾರವಾಗಿಯೂ ಕೂಡ ದಲಿತರಿಗೆ ಮೋಸ ಮಾಡಿದೆ. ಸದಾಶಿವ ಆಯೋಗದ ವರದಿ ಇದ್ದರು ಅದನ್ನು ಅದಲು-ಬದಲು ಮಾಡಿದ್ದಾರೆ. ಮನಸ್ಸಿಗೆ ಬಂದ ರೀತಿ ಮೀಸಲಾತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ಷೇಪಿಸಿದರು.