ದಾವಣಗೆರೆ: ರಾಜ್ಯ ಸರ್ಕಾರ ತನ್ನ ವೈಫಲ್ಯ ಮರೆಮಾಚಲು ಕ್ಷಣಕ್ಕೊಂದು ವಿವಾದ ಸೃಷ್ಠಿಸುತ್ತಿದ್ದು, ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವಂತೆ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಎಡಪಂಥೀಯರ ಟೂಲ್ ಕಿಟ್‌ನ ಕೈಗೊಂಬೆಯAತೆ ವರ್ತಿಸುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ವಿವಾದ ಸೃಷ್ಠಿಸುತ್ತಿದೆ. ಹಿಂದೆ ಶಬರಿಮಲೆ ವಿವಾದ ಸೃಷ್ಠಿಸಿದಂತೆ ಈಗ ಚಾಮುಂಡಿ ಬೆಟ್ಟ ಮತ್ತು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಸೃಷ್ಟಿಸಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದೆ. ಇದರಲ್ಲಿ ಸರ್ಕಾರದ ವೈಫಲ್ಯ ಮುಚ್ಚಿಹಾಕುವ ಷಡ್ಯಂತ್ರವಿದೆ ಎಂದು ಆಪಾದಿಸಿದರು.
ಹಿಂದೂಗಳ ಭಾವನೆಗೆ ಧಕ್ಕೆ ತರುವುದೇ ಎಡಪಂಥೀಯರ ದುರುದ್ದೇಶವಾಗಿದ್ದು, ಅದರಂತೆ ಎಡಪಂಥೀಯರ ತಾಳಕ್ಕೆ ತಕ್ಕಂತೆ ಸಿದ್ಧರಾಮಯ್ಯ ಕೈಜೋಡಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ ಹೊರತು, ಇವರ ಹಿಂದೆ ಅಧಿಕಾರ ನಡೆಸುತ್ತಿರುವವರು ಎಡಪಂಥೀಯರೇ ಆಗಿದ್ದಾರೆ. ಸಿಎಂ ಸಿದ್ಧರಾಮಯ್ಯ ಆಡಳಿತ ಉಳಿಸಿಕೊಳ್ಳಲು ಕುರ್ಚಿ ಬಿಗಿ ಹಿಡಿದಿದ್ದಾರೆ ಹೊರತು, ಆಡಳಿತದಲ್ಲಿ ನಿರಾಸಕ್ತಿ ಹೊಂದಿದ್ದಾರೆ ಎಂದು ದೂರಿದರು.
ಈಗಾಗಲೇ ಹಿಂದೂಗಳು ಜಾಗೃತಗೊಂಡಿದ್ದು, ಎಡಪಂಥಿಯರು ಅಥವಾ ಕಾಂಗ್ರೆಸ್ ಸರ್ಕಾರ ಏನೇ ಹುಳಿ ಹಿಂಡಿದರು ಜನರು ಅದನ್ನು ಪರಾಮರ್ಶಿಸುತ್ತಾರೆ. ಇದನ್ನು ಧರ್ಮಸ್ಥಳ ಚಲೋ ಮೂಲಕ ಈಗಾಗಲೇ ಉತ್ತರಿಸಲಾಗಿದೆ ಎಂದು ಹೇಳಿದರು.