ದಾವಣಗೆರೆ: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದಾವಣಗೆರೆಯಲ್ಲಿ ಮಾಧ್ಯಮದವರ ಮೇಲೆಯೇ ಗರಂ ಆದ ಘಟನೆ ನಡೆದಿದೆ.
ನಗರದ ಎಂಬಿಎ ಮೈದಾನದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ, “ಕರ್ನಾಟಕದಲ್ಲಿ ಬರೀ ಸಿಎಂ ಕುರ್ಚಿಯದೇ ಚರ್ಚೆ ನಡೆಯುತ್ತಿದೆ. ಇದಕ್ಕೆ ಮುಕ್ತಿ ಇಲ್ಲವೇ ಸರ್?” ಎಂಬ ಪ್ರಶ್ನೆ ಕೇಳುತ್ತಿದ್ದಂತೆಯೇ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಟಿಪ್ಪರ್–ಬೈಕ್ ಅಪಘಾತದಲ್ಲಿ ನಾಲ್ವರು ಸಾವು: ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
“ನಿಮಗೆ ದಿನ ಬೆಳಗಾದರೆ ಸಿಎಂ ಕುರ್ಚಿಯ ಬಿಟ್ಟರೆ ಬೇರೆ ಸುದ್ದಿಗಳೇ ಇಲ್ಲವೇ?” ಎಂದು ಪ್ರಶ್ನಿಸಿ, ಪತ್ರಕರ್ತರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೇ ಸಿಡಿಮಿಡಿಗೊಂಡು ಸ್ಥಳದಿಂದ ತೆರಳಿದರು. ಈ ಸಂದರ್ಭ ಮುಖ್ಯಮಂತ್ರಿ ಅವರ ಪ್ರತಿಕ್ರಿಯೆ ಮಾಧ್ಯಮ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ ರೈಲ್ವೆ ದರ ಹೆಚ್ಚಳ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು. “ಕೇಂದ್ರ ಸರ್ಕಾರ ರೈಲ್ವೆ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಹಾಕಿದೆ. ಈ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚುವುದಿಲ್ಲ. ಆದರೆ ರಾಜ್ಯ ಸರ್ಕಾರದ ವಿರುದ್ಧ ಮಾತ್ರ ಮಾತನಾಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Train Fare: ಇಂದಿನಿಂದ ರೈಲು ಪ್ರಯಾಣ ದರ ಏರಿಕೆ
ಮುಂದುವರಿದು ಮಾತನಾಡಿದ ಅವರು, ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆ ಕುರಿತು ಮಾಹಿತಿ ನೀಡಿದರು. “ನಾಳೆ ದೆಹಲಿಯಲ್ಲಿ ಸಿಡಬ್ಲ್ಯೂಸಿ ಸಭೆ ನಡೆಯಲಿದೆ. ವರಿಷ್ಠರು ಸಭೆಯಲ್ಲಿ ಭಾಗವಹಿಸುವಂತೆ ಕರೆದಿದ್ದಾರೆ. ಹೀಗಾಗಿ ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.























