ದಾವಣಗೆರೆ: ತೋಟದ ಮನೆಗೆ ಐವರು ದರೋಡೆಕೋರರು ನುಗ್ಗಿ ಮನೆಯಲ್ಲಿದ್ದ ದಂಪತಿಗಳನ್ನು ಕಟ್ಟಿ ಹಾಕಿ, 8.85 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ದರೋಡೆ ಮಾಡಿದ ಘಟನೆ ಚನ್ನಗಿರಿ ತಾ. ಕಾಕನೂರು ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಕಾಕನೂರು ಗ್ರಾಮದ ಸಮೀಪದ ತೋಟದ ಮನೆಯಲ್ಲಿ ವಾಸಿಸುವ ಮಾದಪ್ಪ ಹಾಗೂ ಸಾವಿತ್ರಮ್ಮ ದಂಪತಿ ತೋಟದ ಮನೆಯಲ್ಲಿ ಶನಿವಾರ ರಾತ್ರಿ ಟಿವಿ ನೋಡುತ್ತಿದ್ದ ವೇಳೆ ಐವರು ದರೋಡೆಕೋರರು ಏಕಾಏಕಿ ಮನೆಗೆ ನುಗ್ಗಿ, ಇಬ್ಬರನ್ನೂ ಕಟ್ಟಿ ಹಾಕಿ, ಅವಾಚ್ಯವಾಗಿ ನಿಂದಿಸಿ, ಚಾಕು ತೋರಿಸಿ ಬೆದರಿಸಿದ, ಹಲ್ಲೆ ನಡೆಸಿದ್ದಾರೆ.
ಮನೆ ಒಡತಿ ಸಾವಿತ್ರಮ್ಮನ ಕೊರಳಲ್ಲಿದ್ದ ಸುಮಾರು 3 ಲಕ್ಷ ಮೌಲ್ಯದ 30 ಗ್ರಾಂ ಮಾಂಗಲ್ಯ ಸರ, ಕೈಯಲ್ಲಿದ್ದ 50 ಸಾವಿರ ಮೌಲ್ಯ ಚಿನ್ನದುಂಗುರ, ಕಿವಿಯಲ್ಲಿದ್ದ 40 ಸಾವಿರ ಮೌಲ್ಯದ 4 ಗ್ರಾಂ ಕಿವಿಯೋಲೆಯನ್ನು ಬಿಚ್ಚಿಸಿಕೊಂಡಿದ್ದಾರೆ. ನಂತರ ಸಾವಿತ್ರಮ್ಮನಿಗೆ ಬೀರು ಕೀ ಕೊಡುವಂತೆ ಹೆದರಿಸಿದ್ದಾರೆ. ಆಕೆ ಕೊಡದಿದ್ದಾಗ ಆಕೆಗೆ ಹೊಡೆದಿದ್ದಾರೆ. ನಂತರ ಆಕೆಯನ್ನು ರೂಂಗೆ ಕರೆದೊಯ್ದು, ಬೀರುವಿನಲ್ಲಿದ್ದ 80 ಸಾವಿರ ಮೌಲ್ಯದ 8 ಗ್ರಾಂ ಚಿನ್ನದ ಸರ, 1.60 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ತೆಗೆದುಕೊಂಡು ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸುಮಾರು ಹೊತ್ತಿನ ನಂತರ ದಂಪತಿಯ ಪುತ್ರ ಮತ್ತು ಅಳಿಯ ಮನೆಗೆ ವಾಪಸ್ಸಾದಾಗ ದಂಪತಿ ಐವರು ದರೋಡೆಕೋರರು ಮನೆಗೆ ನುಗ್ಗಿ ತಮ್ಮ ಮೇಲೆ ಹಲ್ಲೆ ಮಾಡಿ, ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ದರೋಡೆ ಮಾಡಿರುವ ವಿಷಯ ತಿಳಿಸಿದ್ದಾರೆ. ಮಗ, ಅಳಿಯ ಇಬ್ಬರೂ ಮನೆಯ ಸುತ್ತಮುತ್ತ, ತೋಟದಲ್ಲಿ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ತಕ್ಷಣವೇ ಈ ವಿಚಾರವನ್ನು ಸಂತೇಬೆನ್ನೂರು ಪೊಲೀಸರಿಗೆ ತಿಳಿಸಿ, ದೂರು ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ದರೋಡೆಕೋರರಿಗೆ ಶೋಧ ನಡೆಸಿದ್ದಾರೆ.
ಘಟನೆ ಬಗ್ಗೆ ಮನೆಯ ಒಡತಿ ಸಾವಿತ್ರಮ್ಮ ಪೊಲೀಸರಿಗೆ ತಿಳಿಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.