Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದೇಶದಲ್ಲಿ ಕಡ್ಡಾಯ ಮತದಾನ ಜಾರಿಗೆ ತರಬೇಕು: ಮುಖ್ಯಮಂತ್ರಿ ಚಂದ್ರು

ದೇಶದಲ್ಲಿ ಕಡ್ಡಾಯ ಮತದಾನ ಜಾರಿಗೆ ತರಬೇಕು: ಮುಖ್ಯಮಂತ್ರಿ ಚಂದ್ರು

0
74

ದಾವಣಗೆರೆ: ದೇಶದಲ್ಲಿ ಕಡ್ಡಾಯ ಮತದಾನ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಆಮ್ ಆದ್ಮಿ ಪಕ್ಷ (AAP) ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಂದಿನ ವ್ಯವಸ್ಥೆಯಲ್ಲಿ ಹಲವಾರು ನಿಯಮಗಳು ಕಡ್ಡಾಯವಾಗಿರುವಂತೆ ಮತದಾನವೂ ಕಡ್ಡಾಯವಾಗಬೇಕು. ಇದು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ” ಎಂದು ಹೇಳಿದರು.

ಚುನಾವಣಾ ವ್ಯವಸ್ಥೆಯ ಸುಧಾರಣೆ ಕುರಿತು ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗ ಅಭ್ಯರ್ಥಿಗಳಿಂದ ನಿಗದಿತ ಠೇವಣಿ ಪಡೆದು, ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ವೇದಿಕೆ ಒದಗಿಸಬೇಕು ಎಂದು ಸಲಹೆ ನೀಡಿದರು. “ಇದರಿಂದ ಹಣ ಮತ್ತು ಸಮಯದ ವ್ಯರ್ಥ ಖರ್ಚು ಕಡಿಮೆಯಾಗುತ್ತದೆ” ಎಂದರು.

ಇದೇ ವೇಳೆ, “ಯಾವುದೇ ಕ್ಷೇತ್ರದಲ್ಲಿ 50% ಕ್ಕಿಂತ ಕಡಿಮೆ ಮತದಾನವಾದರೆ ಆ ಕ್ಷೇತ್ರದ ಚುನಾವಣೆಯನ್ನು ರದ್ದುಪಡಿಸಬೇಕು” ಎಂಬ ಪ್ರಸ್ತಾವನೆಯನ್ನು ಮುಂದಿಟ್ಟರು. ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಅಭಿವೃದ್ಧಿ ಕಾರ್ಯ ಮಾಡದಿದ್ದರೆ, ಅವರನ್ನು ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆಯೂ ಇರಬೇಕು ಎಂದು ಹೇಳಿದರು.

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪರ್ಯಾಯವಾಗಿ ಆಪ್ ಒಂದು ಬಲವಾದ ಆಯ್ಕೆಯಾಗಿದೆ ಎಂಬುದನ್ನು ತೋರಿಸಲು ನಾವು ಸ್ಪರ್ಧಿಸುತ್ತಿದ್ದೇವೆ” ಎಂದು ಹೇಳಿದರು.

ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದ ಚಂದ್ರು, “ಒಂದೇ ಕುಟುಂಬದಲ್ಲಿ ಮಂತ್ರಿ, ಸಂಸದ, ಶಾಸಕ ಸ್ಥಾನಗಳು ಕೇಂದ್ರೀಕೃತವಾಗಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯ. ಮತದಾರರು ರಾಜಕೀಯ ಬದಲಾವಣೆಗೆ ಮತ ಹಾಕಬೇಕು” ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ನರೇಂದ್ರ ಮೋದಿ ನೇತೃತ್ವದ ಸರ್ಕಾರ ಧರ್ಮ, ಜಾತಿ ಆಧಾರಿತ ರಾಜಕಾರಣ ಮಾಡುತ್ತಿದೆ” ಎಂದು ಆರೋಪಿಸಿದರು.

ಹಾಗೆಯೇ ಅರವಿಂದ ಕೇಜ್ರಿವಾಲ್ ವಿರುದ್ಧ ನಡೆದ ಕ್ರಮಗಳನ್ನು ಉಲ್ಲೇಖಿಸಿ, “ಆಪ್ ಪಕ್ಷ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಿರುವುದರಿಂದ ರಾಜಕೀಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸೀತಾರಾಮ್ ಗುಂಡಪ್ಪ, ಅರ್ಜುನ್ ಹಲಗೆಗೌಡ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.