ದಾವಣಗೆರೆ: ಹಿರಿಯ ಮುತ್ಸದ್ದಿ ರಾಜಕಾರಣಿ, ಅಜಾತಶತ್ರು ಶಾಮನೂರು ಶಿವಶಂಕರಪ್ಪ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ರಾಜ್ಯಸರ್ಕಾರ ಕ್ರಮವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ದಾವಣಗೆರೆಯ ಹೈಸ್ಕೂಲ್ ಮೈದಾನಲ್ಲಿ ಶಾಮನೂರು ಅಂತಿಮ ದರ್ಶನ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಕೇವಲ ರಾಜಕೀಯದಲ್ಲಿ ಮಾತ್ರ ಗುರುತಿಸಿಕೊಂಡವರಲ್ಲ, ಶಿಕ್ಷಣ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಗಣ್ಯರು, ಅಭಿಮಾನಿಗಳ ಮಹಾಪೂರ
ರಾಜ್ಯದ ಒಬ್ಬ ಹಿರಿಯ ರಾಜಕಾರಣಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಅಜಾತ ಶತ್ರು ಆಗಿರುವ ಶಾಮನೂರು ಶಿವಶಂಕರಪ್ಪ ಅಗಲಿಕೆ ನಾಡಿಗೆ, ವಿಶೇಷವಾಗಿ ವೀರಶೈವ ಲಿಂಗಾಯತ ಮಹಾಸಭಾಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಶಾಮನೂರು ಅವರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಎದ್ದಾಗ ಪಕ್ಷ ಮರೆತು ಸಮಾಜ ಒಗ್ಗೂಡಿಸುವ ಕೆಲಸ ಅವರ ನೇತೃತ್ವದಲ್ಲಿ ಆಗಿದೆ. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ನಾಡಿನ ಜನಕ್ಕೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿ ಭಗವಂತ ನೀಡಲಿ. ರಾಜ್ಯದ ಮುಖ್ಯಮಂತ್ರಿಗಳು ಶಾಮನೂರು ಹೆಸರನ್ನು ಚಿರಸ್ಥಾಯಿ ಆಗಿಸಲು ಕಾರ್ಯಪ್ರವೃತ್ತರಾಗಲಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಶಾಮನೂರಿನಿಂದ ದಾವಣಗೆರೆ ಧಣಿಯಾದ ಶಿವಶಂಕರಪ್ಪ









