ದಾವಣಗೆರೆ: ಬಿಜೆಪಿ ಜನಸಾಮಾನ್ಯರ ಏಳಿಗೆಗೆ ಶ್ರಮಿಸುವ ಬದಲು ಭಾವನೆ ಕೆರಳಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನಡೆಸುವ ಮೂಲಕ ನುಡಿದಂತೆ ನಡೆದಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಬೇಕೆಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮನವಿ ಮಾಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಗ್ಯಾರಂಟಿ ಯೋಜನೆಗಳು ಜನಜೀವನಮಟ್ಟ ಸುಧಾರಣೆ ಮಾಡಿವೆ. ಬಡವರ ಎಳಿಗೆಗೆ ಪ್ರಮುಖ ಕೊಡುಗೆ ನೀಡಿದೆ. ವಿಶ್ವದಲ್ಲಿ ಈ ಯೋಜನೆಗೆ ಹೆಚ್ಚು ಪ್ರಶಂಸೆ ವ್ಯಕ್ತವಾಗಿದೆ. ಮಧ್ಯವರ್ತಿ ಹಾವಳಿ ಇಲ್ಲದೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ನೀಡುತ್ತಿದ್ದೇವೆ. ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಒತ್ತು ನೀಡಿದೆ. ಉದ್ಯೋಗ ಸೃಷ್ಟಿ ಆಗಿದೆ. ಖರೀದಿ ಸಾಮರ್ಥ್ಯ ಹಾಗೂ ಜಿಡಿಪಿ ಹೆಚ್ಚು ಆಗಿದೆ. ಇದು ಕಾಂಗ್ರೆಸ್ ಸರ್ಕಾರದ ಆಗಿದೆ ಎಂದರು.
ಜಿಡಿಪಿಯ ಶೇ. 3ರಷ್ಟು ಸಾಲ ಮಾಡಲು ಅವಕಾಶ ಇದೆ. ಶೇ. 2.9 ರಷ್ಟು ಸಾಲ ಮಾಡಿದ್ದೇವೆ. ಇದನ್ನೇ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರ ಸಾಲ ಮಾಡಿ ದಿವಾಳಿಯಾಗಿದೆ ಎಂದು ಆರೋಪಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಿಂದಿನಿಂದ ಅಧಿಕಾರ ನಡೆಸಿದ ಎಲ್ಲಾ ಸರ್ಕಾರಗಳು 53.11 ಲಕ್ಷ ಕೋಟಿ ಸಾಲ ಮಾಡಿದ್ದವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ಕೇವಲ 12 ವರ್ಷಗಳಲ್ಲಿ 190 ಲಕ್ಷ ಕೋಟಿ ಸಾಲ ಮಾಡಿದೆ. ಇದು ಪ್ರಧಾನಿ ಮೋದಿಯವರು ದೇಶದ ಜನರಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ಲೇವಡಿ ಮಾಡಿದರು.




















