ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಶಾಮನೂರು ಕುಟುಂಬದ ಕುಡಿ ಸಮರ್ಥ್ ಶಾಮನೂರು ಅವರಿಗೆ ಅಧಿಕೃತವಾಗಿ ಟಿಕೆಟ್ ಘೋಷಿಸಿದೆ. ಕಳೆದ ಕೆಲವು ದಿನಗಳಿಂದ ಅಭ್ಯರ್ಥಿ ಆಯ್ಕೆ ಕುರಿತು ನಡೆದಿದ್ದ ತೀವ್ರ ಕುತೂಹಲ ಮತ್ತು ಚರ್ಚೆಗಳಿಗೆ ಕೆಪಿಸಿಸಿ ಈಗ ತೆರೆ ಎಳೆದಿದೆ.
ಹಿರಿಯ ರಾಜಕೀಯ ಧುರೀಣ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್ ಶಾಮನೂರು ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಕ್ಷೇತ್ರದಲ್ಲಿ ಶಾಮನೂರು ಕುಟುಂಬಕ್ಕಿರುವ ದಶಕಗಳ ಕಾಲದ ಹಿಡಿತ ಮತ್ತು ಜನರೊಂದಿಗಿನ ಒಡನಾಟವನ್ನು ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಟಿಕೆಟ್ ಘೋಷಣೆಗೂ ಮೊದಲೇ ಶುಕ್ರವಾರದಂದು ಸಮರ್ಥ್ ಅವರು ತಮ್ಮ ತಾಯಿ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ಈಗ ಪಕ್ಷದ ಬಿ ಫಾರ್ಮ್ ದೊರೆತಿರುವುದರಿಂದ ಅವರ ಸ್ಪರ್ಧೆಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. 27 ವರ್ಷದ ಯುವ ಉದ್ಯಮಿ ಸಮರ್ಥ್ ಈ ಮೂಲಕ ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ನಾಯಕರು ಕೂಡ ಟಿಕೆಟ್‌ಗಾಗಿ ಒತ್ತಡ ಹೇರಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಹೈಕಮಾಂಡ್ ಶಾಮನೂರು ಕುಟುಂಬದ ಪರವಾಗಿ ಒಲವು ತೋರಿದೆ. ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ. ಬಿಜೆಪಿಯಿಂದ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರು ಈಗಾಗಲೇ ಕಣದಲ್ಲಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈಗ ನೇರ ಪೈಪೋಟಿ ಏರ್ಪಟ್ಟಿದೆ.




















