ದಾವಣಗೆರೆ: ಶಾಮನೂರು ಕುಟುಂಬದವರು ಟಾಟಾ–ಬಿರ್ಲಾ ವಂಶಸ್ಥರೇನೂ ಅಲ್ಲ. ಇವರ ತಂದೆ ಶಾಮನೂರು ಶಿವಶಂಕರಪ್ಪ ಸೈಕಲ್‌ನಲ್ಲಿ ಓಡಾಡುತ್ತಿದ್ದ ದಿನಗಳು ದಾವಣಗೆರೆ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಶಾಸಕ ಬಿ.ಪಿ. ಹರೀಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟ ಹಣದಿಂದ ಕಾರ್ಖಾನೆ ಕಟ್ಟುವುದು, ವಿದೇಶ ಸುತ್ತುವುದು ಬಿಟ್ಟು ಮೊದಲು ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಕೊಡಬೇಕು ಎಂದು ಅವರು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಪಿ. ಹರೀಶ್, ಇತ್ತೀಚೆಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದರು. ಮಲ್ಲಿಕಾರ್ಜುನ್ ಅವರು, “ನನಗೆ 25 ವರ್ಷವಿದ್ದಾಗಲೇ ನನ್ನ ಹೆಸರಿನಲ್ಲಿ ಸಾಕಷ್ಟು ಆಸ್ತಿ ಇತ್ತು. ನಮ್ಮ ಆಸ್ತಿ ಎಲ್ಲೆಲ್ಲಿ ಇದೆ ಎಂಬುದೇ ನನಗೆ ಗೊತ್ತಿಲ್ಲ. ಯಾರಿಗಾದರೂ ಪತ್ತೆ ಮಾಡಬೇಕಿದ್ದರೆ ವಾಹನ, ಬುತ್ತಿ ಕೊಡುತ್ತೇನೆ” ಎಂದು ಲೇವಡಿ ಮಾಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಹರೀಶ್, “ನನಗೆ ನಿನ್ನ ಆಸ್ತಿ ಹುಡುಕುವ ಯಾವ ಗ್ರಹಚಾರವೂ ಇಲ್ಲ” ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ
ಮೊದಲು ಜಿಲ್ಲೆಯ ಅಭಿವೃದ್ಧಿ, ನಂತರ ಆಸ್ತಿ ಮಾತು: “ಶಾಸಕರನ್ನು ಕರೆದು ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ, ಅನುದಾನ ತಂದುಕೊಡಿ. ಮೊದಲು ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಕೊಡಿ. ನಂತರ ನೀನು ಎಷ್ಟಾದರೂ ಆಸ್ತಿ ಮಾಡಿಕೊಳ್ಳಿ” ಎಂದು ಸಚಿವರಿಗೆ ಹರೀಶ್ ನೇರವಾಗಿ ಸವಾಲು ಹಾಕಿದರು. ಜಿಲ್ಲೆಯ ಜನರಿಗೆ ಮೂಲಭೂತ ಸೌಲಭ್ಯಗಳು, ಅಭಿವೃದ್ಧಿ ಯೋಜನೆಗಳು ಮುಖ್ಯವಾಗಿದ್ದು, ಆಸ್ತಿ ಪ್ರದರ್ಶನ ರಾಜಕೀಯ ಬೇಡ ಎಂದರು.
ಸಿಎಂ ಮಾಹಿತಿ ಪಡೆದು ಮಾತನಾಡಬೇಕು: ಮುಖ್ಯಮಂತ್ರಿಗಳು ಸರಿಯಾದ ಮಾಹಿತಿ ಪಡೆಯದೇ ಹೇಳಿಕೆ ನೀಡುವುದು ತರವಲ್ಲ. ಶಾಮನೂರು ಶಿವಶಂಕರಪ್ಪ ಬಾಪೂಜಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದರೋ ಅಥವಾ ಕಸಿದುಕೊಂಡರೋ ಎಂಬುದರ ಕುರಿತು ಪೂರ್ಣ ಮಾಹಿತಿ ಪಡೆದು ಮಾತ್ರ ಸಾರ್ವಜನಿಕವಾಗಿ ಮಾತನಾಡಬೇಕು ಎಂದು ಶಾಸಕ ಬಿ.ಪಿ. ಹರೀಶ್ ಆಗ್ರಹಿಸಿದರು.
ಇದನ್ನೂ ಓದಿ: ಬುದ್ಧಿಮಾಂದ್ಯ ಮಕ್ಕಳ ಮೇಲೆ ಅಮಾನವೀಯ ಹಲ್ಲೆ
“ಬಾಪೂಜಿ ವಿದ್ಯಾಸಂಸ್ಥೆಯನ್ನು ನಿಜವಾಗಿ ಕಟ್ಟಿದವರು ಬೇರೆಯವರು. ಅವರು ಇಂದು ಸ್ವರ್ಗಸ್ಥರಾಗಿದ್ದಾರೆ. ಅಲ್ಲಿ ಸ್ವರ್ಗದಲ್ಲೇ ‘ಯಾಕಾದರೂ ನಾವು ಈ ಸಂಸ್ಥೆ ಕಟ್ಟಿದೆವು’ ಎಂದು ವ್ಯಥೆ ಪಡುತ್ತಿರುವಿರಬಹುದು” ಎಂದು ಹರೀಶ್ ತೀಕ್ಷ್ಣವಾಗಿ ಕುಟುಕಿದರು.
ಈ ಹೇಳಿಕೆಗಳು ದಾವಣಗೆರೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಇನ್ನಷ್ಟು ರಾಜಕೀಯ ಕಾವು ಪಡೆದುಕೊಳ್ಳುವ ಸಾಧ್ಯತೆ ಇದೆ.









