ದಾವಣಗೆರೆ: ಜಿಲ್ಲಾ ಸಚಿವರು ಎಸ್ಪಿಯವರನ್ನು ಶ್ವಾನದಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆಂದು ನಾನು ಆರೋಪ ಮಾಡಿದ್ದೆ. ಆದ್ದರಿಂದ ಎಸ್ಪಿಯವರೇ ನನ್ನ ವಿರುದ್ಧ ಕೆಟಿಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ವಿರುದ್ಧ ಮೂರು ಸೆಕ್ಷನ್ ಹಾಕಿದ್ದು, ಇದರಲ್ಲಿ ಒಂದು ಜಾಮೀನು ರಹಿತ ಸೆಕ್ಷನ್ ಹಾಕಿದ್ದಾರೆ. ಯಾವ ಕೇಸ್ ಹಾಕಿದರೂ ನಾನು ಹೆದರುವುದಿಲ್ಲ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆಪ್ತ ಸಹಾಯಕ ಠಾಣೆಗೆ ಹೋಗಿ ಎಫ್‌ಐಆರ್ ಪ್ರತಿ ಕೇಳಿದರೆ, ಅಲ್ಲಿಯ ಅಧಿಕಾರಿ, ಇದು ಸಚಿವ ಮಲ್ಲಿಕಾರ್ಜುನ್ ಅವರ ಪ್ರಕರಣ ಎಫ್‌ಐಆರ್ ಕೊಡಲು ಆಗಲ್ಲ. ಆನ್‌ಲೈನ್‌ನಲ್ಲಿ ತೆಗೆದುಕೊಳ್ಳಿ ಎಂದು ಹೇಳಿ ಕಳುಹಿಸಿದ್ದಾರೆ. ನಾನು ಯಾವ ಎಫ್‌ಐಆರ್‌ಗೂ ಹೆದರಲ್ಲ. ಕಾನೂನಿನ ಬಗ್ಗೆ ಗೌರವವಿದೆ. ನ್ಯಾಯಾಲಯದ ಮೂಲಕ ಉತ್ತರ ಕೊಡುತ್ತೇನೆ ಎಂದರು.
ಸಚಿವ ಮಲ್ಲಿಕಾರ್ಜುನ್ ಹಣ, ಅಧಿಕಾರದ ಮದದಿಂದ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಚಿವರ ಭೂ ಹಗರಣದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತ ದೂರು ನೀಡಿದ್ದೇನೆ. ಮುಖ್ಯ ಕಾರ್ಯದರ್ಶಿಯವರು ಈ ಕುರಿತು ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿ ಐದು ತಿಂಗಳಾದರೂ ವರದಿ ಕೊಟ್ಟಿಲ್ಲ. ಜಿಲ್ಲಾಡಳಿತ ವರದಿ ನೀಡದಂತೆ ಸಚಿವರು ನೋಡಿಕೊಂಡಿದ್ದಾರೆ. ಇನ್ನು ಸರ್ಕಾರಿ ಕಟ್ಟಡ ಹಾಗೂ ಸಾರ್ವಜನಿಕ ಆಸ್ತಿಯ ಮೇಲೆ ಹಾಕಿರುವ ಬದುಕಿರುವ ರಾಜಕಾರಣಿಗಳ ಹೆಸರು ತೆಗೆಯುವಂತೆ ಉಚ್ಚ ನ್ಯಾಯಾಲಯ ಆದೇಶ ನೀಡಿದೆ. ಅವುಗಳನ್ನೂ ಅಧಿಕಾರಿಗಳು ತೆಗೆಯದಂತೆ ಸಚಿವರು ನೋಡಿಕೊಂಡಿದ್ದಾರೆ ಎಂದು ಬಿ.ಪಿ. ಹರೀಶ್ ಇದೇ ಸಂದರ್ಭದಲ್ಲಿ ಆರೋಪಿಸಿದರು.
ತಾವು ಕಬಳಿಸಿರುವ ಜಮೀನನ್ನು ಬಿ.ಪಿ. ಹರೀಶ್ ರೈತರ ಪರ ಹೋರಾಟ ಮಾಡಿ ರೈತರಿಗೆ ಮರಳಿಸುವಂತೆ ಮಾಡುತ್ತಾರೆಂಬ ಭಯದಿಂದ ಸಚಿವರು, ಮಹಿಳಾ ಪೊಲೀಸ್ ಅಧಿಕಾರಿಗಳ ಮೂಲಕ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸಚಿವರ ಈ ವರ್ತನೆಯಿಂದಾಗಿಯೇ ನಾನು ಸಚಿವರು ಅಧಿಕಾರಿಗಳನ್ನು ಶ್ವಾನದಂತೆ ಬಳಸಿಕೊಳ್ಳುತ್ತಿದ್ದಾರೆಂದು ಟೀಕಿಸಿದ್ದೆ ಎಂದು ಶಾಸಕ ಬಿ.ಪಿ. ಹರೀಶ್ ಸಮರ್ಥಿಸಿಕೊಂಡರು.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನ ಪಕ್ಕದಲ್ಲಿ ಕೂರಿಸಿಕೊಂಡು ರಾಜಕೀಯ ಸುದ್ದಿಗೋಷ್ಠಿ ಮಾಡುವ ಮೂಲಕ ಸಚಿವರು ಜನಸಾಮಾನ್ಯರನ್ನು ಬೆದರಿಸುವ ಕೆಲಸವೂ ಮಾಡುತ್ತಿದ್ದಾರೆ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಮುಸ್ಲಿಮರು ಹೆಚ್ಚಿರುವ ಪ್ರದೇಶದಲ್ಲಿ ಫ್ಲೆಕ್ಸ್ ಹಾಕೋದು, ಮೆರವಣಿಗೆ ಮಾಡೋದು ಮಾಡಿದರೆ ಒದ್ದು ಒಳಗೆ ಹಾಕಿಸುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಎಸ್ಪಿಯವರು ಮೊದಲು ಪ್ರಕರಣ ದಾಖಲಿಸಬೇಕಿತ್ತು. ಕೂಡಲೇ ಸಚಿವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.