ದಾವಣಗೆರೆ: ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಬಾಲಕನ ಸಾವಿಗೆ ಕಾರಣನಾಗಿದ್ದಲ್ಲದೇ, ತಲೆ ಮರೆಸಿಕೊಂಡಿದ್ದ ಎಲ್.ಪಿ.ಆರ್ ಪ್ರಕರಣದ ಆರೋಪಿ ಲಾರಿ ಚಾಲಕನನ್ನು 32 ವರ್ಷಗಳ ನಂತರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಸುಭಾಷ್ ನಗರ ನಿವಾಸಿ, ಕೃಷಿ ಮತ್ತು ಕೂಲಿ ಕೆಲಸ ಮಾಡುತ್ತಿದ್ದ ಕುಮಾರ(67 ವರ್ಷ) ಬಂಧಿತ ಆರೋಪಿ. ಜಿಲ್ಲೆಯ ಜಗಳೂರು ತಾಲೂಕು ಕಲ್ಲೇದೇವರಪುರ ಗ್ರಾಮದ ವೀರಪ್ಪ ಎಂಬುವರ ತಮ್ಮನ ಮಗನಾಗ ಯತೀಶ ಕಳೆದ 1994 ನವೆಂಬರ್ 13ರಂದು ಬೆಳಗ್ಗೆ ಗ್ರಾಮವನ್ನು ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಶ್ರೀ ಕಲ್ಲೇಶ್ವರ ದೇವಸ್ಥಾನದ ಎದುರು ನಡೆದು ಹೋಗುತ್ತಿದ್ದಾಗ ಹೊಸಪೇಟೆ ಕಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಪತ್ತೆಗಾಗಿ ಆಗಿನ ಜಗಳೂರು ಠಾಣೆ ಪಿಎಸ್‌ಐ ನಾರಾಯಣ ರಜಪೂತ್ ತನಿಖೆ ಕೈಗೊಂಡಿದ್ದರು. ಪ್ರಕರಣದ ಆರೋಪಿ ಕುಮಾರ ತಂದೆ ಗಂಗಾಧರಪ್ಪ 34 ವರ್ಷ (1994ರಲ್ಲಿ) ಎಂಬಾತನನ್ನು ಪತ್ತೆ ಮಾಡಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವ ಕಾಲಕ್ಕೆ ಆರೋಪಿ ಹಾಜರಾಗಿದ್ದು, ನ್ಯಾಯಾಲಯದಲ್ಲಿ ಕೇಸ್ ದಂಡ ಕಟ್ಟಿ ಮುಕ್ತಾಯವಾಗಿದೆಯೆಂದು ಯಾರೋ ಹೇಳಿದ ಮಾತನ್ನು ಕೇಳಿ, ನ್ಯಾಯಾಲಯಕ್ಕೆ ಹಾಜರಾಗದೇ ಸುಮ್ಮನಾಗಿದ್ದ. ನಂತರ ಆರೋಪಿಯು ತಾನು ಪ್ರಕರಣ ದಾಖಲಾದಾಗ ನೀಡಿದ ವಿಳಾಸದಲ್ಲಿರದೇ ಬೇರೆಡೆ ವಾಸವಾಗಿದ್ದು, ಲಾರಿ ಚಾಲಕ ವೃತ್ತಿ ಕೈಬಿಟ್ಟು ಮನೆಯಲ್ಲಿ ಕೂಲಿನಾಲಿ ಮಾಡಿಕೊಂಡು ಜೀವನ ಮಾಡಿಕೊಂಡಿದ್ದ. ಅಂದಿನಿಂದ ಆರೋಪಿ ಕುಮಾರ ಪೊಲೀಸರ ಸಂಪರ್ಕಕ್ಕೆ ಸಿಗದೇ ಯಾವುದೇ ಸಮನ್ಸ್, ವಾರೆಂಟ್‌ಗಳಿಗೆ ಉತ್ತರಿಸಿದೆ ನಾಪತ್ತೆಯಾಗಿದ್ದರಿಂದ ನ್ಯಾಯಾಲಯವು ಪ್ರಕರಣವನ್ನು 2000 ಮೇ 26ರಂದು ಎಲ್.ಪಿ.ಆರ್ ಪ್ರಕರಣವೆಂದು ಘೋಷಿಸಿತ್ತು.
ಜಗಳೂರು ಠಾಣೆ ಪಿಐ ಸಿದ್ರಾಮಯ್ಯ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿ ಚಾಲಕ, ಆತನ ಚಾಲನಾ ಪರವಾನಿಗೆ ದಾಖಲಾತಿಯಿಂದ ಹಾಸನ ಆರ್.ಟಿ.ಓ ಕಚೇರಿಯಲ್ಲಿ ಆರೋಪಿ ವಿಳಾಸ ಪತ್ತೆ ಮಾಡಿದ್ದರು. ಆರೋಪಿ ಕುಮಾರ ಈಗ 67 ವರ್ಷದವನಾಗಿದ್ದು, ಅಪಘಾತದ ನಂತರ ಚಾಲಕ ವೃತ್ತಿ ಬಿಟ್ಟು ಕೂಲಿ ಕೆಲಸ ಮಾಡಿಕೊಂಡು, ಹಾಲಿ ಹಸು ಮೇಯಿಸಿಕೊಂಡು ಜೀವನ ಮಾಡುತ್ತಿದ್ದುದು ತಿಳಿದು ಬಂದಿದೆ. ತಲೆಮರೆಸಿಕೊಂಡಿದ್ದ ಆರೋಪಿ ಕುಮಾರನನ್ನು ಕರೆತಂದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಫೆ. 3ರಂದು ಮುದ್ದತ್ತು ದಿನಾಂಕ ನೀಡಿದೆ.























